ಮೌಂಟ್‌ಮೌಂಗಾನುಯಿ, ಫೆ 11 (ಯುಎನ್ಐ) ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವೃತ್ತಿ ಜೀವನದ ನಾಲ್ಕನೇ ಶತಕ ಪೂರೈಸುವ ಮೂಲಕ ನಾಯಕ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆ.ಎಲ್ ರಾಹುಲ್ 113 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಗಳ ನೆರವಿನಿಂದ 112 ರನ್ ಗಳಿಸಿದರು. ವೃತ್ತಿ ಜೀವನದ ನಾಲ್ಕನೇ ಹಾಗೂ ಐದನೇ ಕ್ರಮಾಂಕದಲ್ಲಿ ಮೊದಲನೇ ಶತಕ ಸಿಡಿಸಿದರು.
ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಕೆ.ಎಲ್ ರಾಹುಲ್ ಮುರಿದಿದ್ದಾರೆ. ತಮ್ಮ 31ನೇ ಇನಿಂಗ್ಸ್‌ನಲ್ಲಿ ಕೆ.ಎಲ್ ರಾಹುಲ್ ನಾಲ್ಕನೇ ಶತಕ ಸಾಧನೆ ಮಾಡಿದ್ದಾರೆ. ನಾಲ್ಕು ಶತಕ ಸಿಡಿಸಲು ವಿರಾಟ್ ಕೊಹ್ಲಿ 36 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಶಿಖರ್ ಧವನ್ (24 ಇನಿಂಗ್ಸ್) ಅಗ್ರಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ದಾಖಲೆ ಮುರಿಯುವ ಜತೆಗೆ ರಾಹುಲ್, ಮಾಜಿ ದಿಗ್ಗಜ ತಡೆಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ದಾಖಲೆಯನ್ನುಸರಿಗಟ್ಟಿದ್ದಾರೆ. ಹಾಗೆಯೇ, ರಾಹುಲ್ ದ್ರಾವಿಡ್ ಬಳಿಕ ಏಷ್ಯಾ ಹೊರಗಡೆ ಶತಕ ಬಾರಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಕೆ.ಎಲ್ ಭಾಜನವಾದರು. 1999ರಲ್ಲಿ ಶ್ರೀಲಂಕಾ ವಿರುದ್ದ ಇಂಗ್ಲೆಂಡ್‌ನ ಟಾಂಟನ್ ಮೈದಾನದಲ್ಲಿ ರಾಹುಲ್ ದ್ರಾವಿಡ್ (145) ಶತಕ ಸಿಡಿಸಿದ್ದರು.
ಕಳೆದ ಮೂರು ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಐದು ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದ ಭಾರತೀಯ ಬ್ಯಾಟ್ಸ್‌ಮನ್‌ನಿಂದ ದಾಖಲಾದ ಮೊದಲ ಶತಕ ಇದಾಯಿತು. ಈ ಹಿಂದೆ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 5ನೇ ಕ್ರಮಾಂಕದಲ್ಲಿ ಶತಕ ಸಾಧನೆ ಮಾಡಿದ್ದರು. ಇದೀಗ ರಾಹುಲ್ ಇದೇ ಕ್ರಮಾಂಕದಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.