ಮಹಿಳಾ ಪ್ರತಿಭಟನಕಾರರ ಮೇಲೆ ದೌರ್ಜನ್ಯ: ಯುಪಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಲಕ್ನೋ, ಫೆ.10 :     ಸಿಎಎ  ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ವೇಳೆ ಪೊಲೀಸರು ನಡೆಸಿದ ಕ್ರೂರ ದೌರ್ಜನ್ಯದ ಕುರಿತು  ಕಾಂಗ್ರೆಸ್ ನೀಡಿದ ದೂರಿನ ಮೇರೆಗೆ ರಾಷ್ಟ್ರೀಯ ಮಾನವ  ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್  ನೀಡಿದೆ.      

ಆರು ವಾರಗಳಲ್ಲಿ ವಿವರವಾದ ಮತ್ತು ನಿರ್ದಿಷ್ಟವಾದ ವರದಿಯನ್ನು ನೀಡುವಂತೆ ಎನ್‌ಎಚ್‌ಆರ್‌ಸಿ ಸೂಚಿಸಿದೆ.        

ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು ಸೋಮವಾರ ಎನ್‌ಎಚ್‌ಆರ್‌ಸಿಗೆ ಪತ್ರದ ಮೂಲಕ ಪೊಲೀಸ್ ದೌರ್ಜನ್ಯದ ಮಾಹಿತಿ ನೀಡಿದ್ದರು.

ಕಾಂಗ್ರೆಸ್  ನಿಯೋಗವೊಂದು ತನ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ  ಜನವರಿ 27ರಂದು ದೆಹಲಿಯಲ್ಲಿ ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನು ಭೇಟಿ ಮಾಡಿ ಸಿಎಎ  ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ಮಹಿಳೆಯರು ಮತ್ತು ಇತರರ ಮೇಲಿನ  ದೌರ್ಜನ್ಯದ ಬಗ್ಗೆ ದೂರು ನೀಡಿತ್ತು.             

ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಮೇಲೆ ಉತ್ತರ ಪ್ರದೇಶ ಪೊಲೀಸರು ದೌರ್ಜನ್ಯ ನಡೆಸಿರುವುದು ಮಾನವ ಹಕ್ಕುಗಳ ಸಂಪೂರ್ಣ ದುರುಪಯೋಗವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದರು.