ಲಕ್ನೋ, ಡಿಸೆಂಬರ್ 16 ಪೌರತ್ವ
ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ವೇಳೆ ನವದೆಹಲಿಯ ಜಾಮಿಯಾ ಮಿಲ್ಲಿಯಾ ಮತ್ತು ಅಲಿಘಡ
ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರದ ಬಗ್ಗೆ ತೀವ್ರ ಕಳವಳ
ವ್ಯಕ್ತಪಡಿಸಿರುವ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ, ಸೋಮವಾರ ಈ ಘಟನೆಗಳ ಬಗ್ಗೆ
ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
"ಹೊಸ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ನಡುವೆ ಹಲವಾರು ಮುಗ್ಧ
ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಹಿಂಸಾಚಾರಕ್ಕೆ ಒಳಗಾಗಿದ್ದಾರೆ. ಮೊದಲು ಉತ್ತರ ಪ್ರದೇಶದ
ಅಲಿಘಡ ಮತ್ತು ನಂತರ ಜಾಮಿಯಾ ವಿಶ್ವವಿದ್ಯಾಲಯ ಮತ್ತು ಇಡೀ ಜಾಮಿಯಾ ಪ್ರದೇಶದಲ್ಲಿ ದೌರ್ಜನ್ಯವೆಸಗಲಾಗಿದೆ.
ಬಿಎಸ್‌ಪಿ ಸಂತ್ರಸ್ತರ ಪರ ನಿಲ್ಲಲಿದೆ" ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ,
ಯುಪಿ ಮತ್ತು ಕೇಂದ್ರ ಸರ್ಕಾರವು ಈ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಇದಕ್ಕೆ ಕಾರಣರಾದವರನ್ನು
ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು. ಪೊಲೀಸ್ ಮತ್ತು ಆಡಳಿತ ಕೂಡ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು.
ಈ ಬೆಂಕಿ ನಮ್ಮ ಕೈಮೀರಿ ಇಡೀ ದೇಶವನ್ನು ಅದರಲ್ಲೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳನ್ನು ಆವರಿಸಲಿದೆ
ಎಂದು ಅವರು ಎಚ್ಚರಿಸಿದ್ದಾರೆ.ಎಲ್ಲಾ ಸಮುದಾಯದವರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು
ಎಂದು ಬಿಎಸ್‌ಪಿ ಅಧ್ಯಕ್ಷೆ ಮನವಿ ಮಾಡಿದ್ದಾರೆ.ಇದಕ್ಕೂ ಮೊದಲು, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ
ಅಖಿಲೇಶ್ ಯಾದವ್ ಅವರು ನವದೆಹಲಿಯ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು
ಖಂಡಿಸಿ ಅದನ್ನು 'ಗುಜರಾತ್ ಮಾದರಿ' ಎಂದು ಟೀಕಿಸಿದ್ದರು."ಜಾಮಿಯಾ ಮಿಲ್ಲಿಯಾದಲ್ಲಿ ವಿದ್ಯಾರ್ಥಿಗಳ
ಮೇಲೆ ಕ್ರೂರ ಹಿಂಸಾಚಾರವೆಸಗಲಾಗಿದೆ. ಅವರು ಇನ್ನೂ ಕಟ್ಟಡದೊಳಗೆ ಸಿಲುಕಿಕೊಂಡಿದ್ದಾರೆ. ಇದು ಅತ್ಯಂತ
ಖಂಡನೀಯ. ಇಡೀ ದೇಶವನ್ನು ಹಿಂಸಾಚಾರಕ್ಕೆ ಕೊಂಡೊಯ್ಯಲಾಗುತ್ತಿದ್ದು, ಇದು ಇತ್ತೀಚಿನ ದಿನಗಳಲ್ಲಿ ಅಧಿಕಾರ
ಪಡೆದವರ ನಿಜವಾದ 'ಗುಜರಾತ್ ಮಾದರಿ'? ಎಂದು ಕಟುಶಬ್ಧಗಳಲ್ಲಿ
ಟೀಕಿಸಿದ್ದಾರೆ. ನವದೆಹಲಿಯ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯ ಮತ್ತು ಅಲಿಘಡದ ಮುಸ್ಲಿಂ ವಿಶ್ವವಿದ್ಯಾಲಯ
(ಎಎಂಯು) ನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ತೀವ್ರ ಪ್ರತಿಭಟನೆ ಭುಗಿಲೆದ್ದಿದೆ.ಭಾನುವಾರ
ರಾತ್ರಿ ಎಎಂಯುನಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವಿನ ಘರ್ಷಣೆಯ ನಂತರ, ಚಳಿಗಾಲದ ರಜಾದಿನಗಳನ್ನು
ಘೋಷಿಸಿದ್ದು, ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು
ಸಹ ಸ್ಥಗಿತಗೊಳಿಸಲಾಗಿದೆ.