ಲೋಕದರ್ಶನ ವರದಿ
ವಿಜಯಪುರ 07: ಕೇಂದ್ರ ಗೃಹ ಸಚಿವರು ಆಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ದೇಶಾದ್ಯಂತ ವಿಸ್ತರಣೆ ಮಾಡುವ ಹೇಳಿಕೆ ನೀಡಿದ್ದು, ಇದರಿಂದ ಸಾವಿರಾರು ಕೋಟಿ ರೂ. ಸರಕಾರದ ಹಣ ಪೋಲಾಗುತ್ತದೆ ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ (ಗಣಿಹಾರ) ದೂರಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಕೋಟಿ ರೂ. ಖರ್ಚಾಗುವ ರಾಷ್ಟ್ರೀಯ ಪೌರತ್ವ ನೊಂದಣಿ ಪ್ರಕ್ರಿಯೆ ಕೈಗೊಂಡು ಒಂದು ಸಮುದಾಯವನ್ನು ಭಯದ ನೆರಳಲ್ಲಿ ಬದುಕಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಆಸ್ಸಾಂನಲ್ಲಿಯೇ ಕೋಟ್ಯಂತರ ರೂ. ಖರ್ಚು ಮಾಡಿ ಈ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಅಲ್ಲಿ 19 ಲಕ್ಷ ಮತದಾರರ ಹೆಸರುಗಳು ಎನ್ಆರ್ಸಿ ಯಿಂದ ಕೈ ಬಿಟ್ಟು ಹೋಗಿವೆ. ಇದರಲ್ಲಿ 13 ಲಕ್ಷಕ್ಕೂ ಹೆಚ್ಚು ಮುಸ್ಲೀಮೇತರರ ಹೆಸರುಗಳು ಪಟ್ಟಿಯಿಂದ ಕೈ ಬಿಟ್ಟಿವೆ. ಅಷ್ಟೇ ಅಲ್ಲ ಸೈನ್ಯದಲ್ಲಿ ಪ್ರಾಣವನ್ನೇ ಪಣಕಿಟ್ಟು ಹೋರಾಡಿದ ಅನೇಕ ವೀರಯೋಧರ ಹೆಸರುಗಳು ಮಾಜಿ ರಾಷ್ಟ್ರಪತಿಗಳ ಹೆಸರುಗಳೇ ಪಟ್ಟಿಯಿಂದ ಬಿಟ್ಟು ಹೋಗಿವೆ. ಎನ್ಆರ್ಸಿ ಪ್ರಕಿಯೆ ಸರಿಯಾಗಿ ನಡೆದಿಲ್ಲ ಎಂದು ಕೆಲವು ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಈ ಪ್ರಕಿರಯೆಯನ್ನು ರಾಷ್ಟ್ರಾದ್ಯಂತ ವಿಸ್ತರಣೆ ಮಾಡುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶಸ್ನಿಸಿದರು.
ಎನ್ಆರ್ಸಿ ಮೂಲಕ ಮುಸ್ಲಿಂ ಬಾಂಧವರಲ್ಲಿ ಭೀತಿ ಹುಟ್ಟಿಸುವ ಕುತಂತ್ರ ನಡೆದಿದೆ. ಮುಸ್ಲೀಂ ಬಾಂಧವರು ಈ ಬಗ್ಗೆ ಭಯಪಡಬೇಕಾಗಿಲ್ಲ. ಎನ್.ಆರ್.ಸಿ ಕೆವಲ ಒಂದು ಸಮುದಾಯಕ್ಕೆ ಸೀಮಿತವಾಗಿ ಮಾಡುವುದಲ್ಲ. ಇಡೀ ದೇಶದ ನಾಗರಿಕರಿಗೆ ಇದು ಸಂಬಂಧಿಸಿದ್ದಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಕೆಲವು ಮುಸ್ಲೀಂ ನಾಯಕರು ಕೂಡ ಈ ಬಗ್ಗೆ ಮುಸ್ಲೀಂ ಸಮುದಾಯದ ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ. ಮುಸ್ಲಿಂ ನಾಯಕರು ಎನ್.ಆರ್.ಸಿ. ಬಗೆಗಿನ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ, ಎನ್ಆರ್ಸಿಯ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.
ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪಡೆಯಲು ಸಾಕಷ್ಟು ಹೆಣಗಾಡಬೇಕಾದ ಪರಿಸ್ಥಿತಿ ಇದೆ, ಅನೇಕ ಬಡಜನತೆಯಲ್ಲಿ ಜನನ-ಮರಣ ದಾಖಲಾತಿಗಳ ನಿರ್ವಹಣೆಯೂ ಸರಿಯಾಗಿಲ್ಲ, ಹೀಗಿರುವಾಗ ಆಂತರಿಕ ಸುರಕ್ಷತೆಯ ನೆಪವಾಗಿರಿಸಿಕೊಂಡು ಎನ್ಆರ್ಸಿ ಕಾಡರ್್ ಹೆಸರಿನಲ್ಲಿ ಮತ್ತೆ ಜನರನ್ನು ಕ್ಯೂನಲ್ಲಿ ನಿಲ್ಲಿಸಿ ಮತ್ತಷ್ಟು ಹೈರಾಣಕ್ಕೀಡು ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಅಕ್ರಮ ಬಾಂಗ್ಲಾ ನುಸುಳುಕೋರರ ಪತ್ತೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಸಿಕೊಳ್ಳುತ್ತಿದೆ, ಆದರೆ ಎಲ್ಲಿ ನುಸುಳುಕೋರರಿದ್ದಾರೋ ಅಲ್ಲಿ ಅದನ್ನು ನಡೆಸಲಿ, ಬಾಂಗ್ಲಾ ವಿಭಜನೆ ಮೊದಲಾದ ಘಟನೆಗಳಿಂದಾಗಿ ಆಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೊಂದಣಿ ನಡೆಸಬೇಕಾಗಿತ್ತು, ಆದರೆ ಅದನ್ನೇ ನೆಪವಾಗಿರಿಸಿಕೊಂಡು ಇಡೀ ರಾಷ್ಟ್ರದಾದ್ಯಂತ ಈ ನೊಂದಣಿ ಪ್ರಕ್ರಿಯೆ ನಡೆಸುವುದು ಸರಿಯಲ್ಲ. ಈ ಬಗ್ಗೆ ದೇಶದ ನಾಗರಿಕರು ಜಾಗೃತರಾಗಬೇಕಿದೆ ಎಂದರು.
ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಚುನಾವಣೆ ಸಂದರ್ಭದಲ್ಲಿ ದೇಶದ ಜನತೆಗೆ ನೀಡಿದ ಯಾವ ಆಶ್ವಾಸನೆಗಳು ಈಡೇರಿಸುತ್ತಿಲ್ಲ. ಬಿಜೆಪಿ ಸರಕಾರ ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ದೇಶದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ದೇಶದ ಪ್ರದಾನಿ ನರೇಂದ್ರ ಮೋದಿ ಅವರು ಈ ಹಿಂದೆ ಉಳ್ಳಾಗಡ್ಡಿ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಸಚೀನ್ ತೆಂಡೂಲ್ಕರ್ಗಿಂತ ಮೊದಲು ಉಳ್ಳಾಗಡ್ಡಿಯೇ ಸೆಂಚೂರಿ ಬಾರಿಸಿದೆ ಎಂದು ಮೋದಿ ಲೇವಡಿ ಮಾಡಿದ್ದರು. ಈಗ ಉಳ್ಳಾಗಡ್ಡಿ ಬೆಲೆ ಡಬಲ್ ಸೆಂಚ್ಯೂರಿ ಬಾರಿಸಿದರೂ ಮೋದಿ ಅವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಎಂ.ಸಿ. ಮುಲ್ಲಾ, ಅಕ್ರಂ ಮಾಶ್ಯಾಳಕರ, ಹಬೀಬುಲ್ಲಾ ಘೋರ್ಪಡೆ, ಖ್ವಾಜಾ ಬೇಪಾರಿ ಉಪಸ್ಥಿತರಿದ್ದರು.