ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಉದ್ಘಾಟಿಸಿದ ಉಪರಾಷ್ಟ್ರಪತಿ ಜಗದೀಪ್ ಧಂಖರ್

Shri Sanidhya Q Complex inaugurated by Vice President Jagdeep Dhankhar

ಧರ್ಮಸ್ಥಳ 07: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಅನ್ನು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಉದ್ಘಾಟಿಸಿದರು. ಜನರು ರಾಜಕೀಯ ಅಡಚಣೆಗಳನ್ನು ಮೀರಿ ಬೆಳೆಯಬೇಕು ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ತಲುಪಲು ಸಹಾಯ ಮಾಡಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಮಂಗಳವಾರ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಧಂಖರ್ ಅವರು, ಮಂಜುನಾಥ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಈ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಇದು ಕೇವಲ ಕಟ್ಟಡ ಮಾತ್ರವಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ. ಎಲ್ಲರಿಗೂ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು, ಸಮಾನತೆಯನ್ನು ತೋರಿಸುತ್ತದೆ ಎಂದರು. ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು. ರಾಜಕೀಯವಾಗಿ ನಾವು ಇನ್ನಷ್ಟು ಪ್ರಬಲರಾಗಬೇಕು, ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕಿದೆ. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆಯಿದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದು ತಿಳಿಸಿದರು.

ವಿಭಜನೆ ಮತ್ತು ತಪ್ಪು ಮಾಹಿತಿಯಿಂದ ನಮ್ಮನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಭಾರತ ವಿರೋಧಿ ಶಕ್ತಿಗಳನ್ನು ನಾವು ತಟಸ್ಥಗೊಳಿಸಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಧಂಖರ್ ಮತ್ತು ಅವರ ಪತ್ನಿ ಡಾ.ಸುದೇಶ ಧಂಖರ್ ಅವರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.