ವಿಜಯಪುರ: ನಗರದ ರಸ್ತೆಗಳ ತೆಗ್ಗು ಗುಂಡಿಗಳಲ್ಲಿ ಸಸಿನೆಟ್ಟು ಪ್ರತಿಭಟನೆ ದುರಸ್ತಿಗೆ 15 ದಿನಗಳ ಗಡುವು ನೀಡಿದ ಕೆಪಿಪಿ

ಲೋಕದರ್ಶನ ವರದಿ

ವಿಜಯಪುರ 15: ನಗರಾದ್ಯಂತ ಮುಖ್ಯರಸ್ತೆ ಹಾಗೂ ಎಲ್ಲ ಉಪರಸ್ತೆಗಳಲ್ಲೂ ಭಾರಿ ಗುಂಡಿಗಳು ಬಿದ್ದು ಜನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು ಕೂಡಲೇ ಎಲ್ಲ ರಸ್ತೆಗಳಲ್ಲಿರುವ ಗುಂಡಿಗಳನ್ನು ದುರಸ್ತಿಮಾಡಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಪಬ್ಲಿಕ ಪವರ್ ಸಂಘಟನೆಯ ನೇತೃತ್ವದಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳ ಮುಖಂಡರ ಸಹಯೋಗದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳ ನಿವಾಸದ ಮುಂದೆ ಇರುವ ತೆಗ್ಗು, ಗುಂಡಿಗಳಲ್ಲಿ ಹಲವಾರು ಸಸಿಗಳನ್ನು ನೆಟ್ಟು ತೀವ್ರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೆಪಿಪಿ ರಾಜ್ಯಾಧ್ಯಕ್ಷ ಪ್ರಕಾಶ ಕುಂಬಾರ ಮಾತನಾಡಿ, ನಗರದಲ್ಲೇಡೆ ಅನೇಕ ಗುಂಡಿಗಳು ಬಿದ್ದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದು ಜಾಣ,ಕಿವುಡ, ಜಾಣ ಕುರುಡ ಜಿಲ್ಲಾಡಳಿತ ಮತ್ತು ನಗರಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ. ಕೂಡಲೇ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ನಾವು ಈ ಪ್ರತಿಭಟನೆ ನಡೆಸಿದ್ದೇವೆ ಎಂದರು.

ಕೆಪಿಪಿ ರಾಜ್ಯ ಪ್ರ.ಕಾರ್ಯದರ್ಶಿ  ದಸ್ತಗೀರ ಸಾಲೋಟಗಿ ಮಾತನಾಡಿ ಇಲ್ಲಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಜನಪ್ರತಿನಿಧಿಗಳ ಅಧಿಕಾರಿಗಳು ಇಲ್ಲದಂತಾಗಿದೆ. ಕಾರಣ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಯಲ್ಲಿಟ್ಟು ತೊಂದರೆಗೊಳಗಾದ ಜನರಿಗೆ ಅವರಿಂದಲೇ ಪರಿಹಾರ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡ ಆನಂದ ಔದಿ, ಕೆಪಿಪಿ ರಾಜ್ಯ ಸಂಚಾಲಕ ಫಯಾಜ ಕಲಾದಗಿ, ಪಿದಾ ಕಲಾದಗಿ, ಬಸವರಾಜ, ರಾಹುಲ ಮಾನಕರ, ಅಬ್ದುಲರಜಾಕ ಕಾಖಂಡಕಿ ಸೇರಿದಂತೆ ಮುಂತಾದವರು ಇದ್ದರು.