ಲೋಕದರ್ಶನ ವರದಿ
ವಿಜಯಪುರ 08: ಜಿಲ್ಲೆಯಲ್ಲಿ ಬರುವ ಆಗಸ್ಟ್ 4 ರಂದು ಕೋಟಿ ವೃಕ್ಷ ಅಭಿಯಾನ ದಡಿ ವೃಕ್ಷೊತ್ಥಾನ-ಮ್ಯಾರಾಥಾನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಸುವ ಉದ್ದೇಶ ಮಾತ್ರವಲ್ಲದೇ ಜಿಲ್ಲೆಯ ಜನರ ಆರೋಗ್ಯ, ಉತ್ತಮ ಪರಿಸರ ರೂಪಿಸುವಲ್ಲಿಯೂ ಸಹಕಾರಿಯಾಗಲಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿಕೊಂಡಿದ್ದಾರೆ.
ನಗರದ ಸ್ಟೇಶನ್ ರಸ್ತೆಯಲ್ಲಿರುವ ಪ್ರವಾಸೋದ್ಯಮ ಇಲಾಖೆ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕೋಟಿವೃಕ್ಷ ಅಭಿಯಾನ ಕಾರ್ಯಕ್ರಮ ಆಯೋಜಿಸುವ ಕುರಿತ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವೃಕ್ಷೊತ್ಥಾನ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ವಿಭಾಗಗಳ ಮ್ಯಾರಾಥಾನ್ಗಳಲ್ಲಿ ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯೊಂದಿಗೆ ಭಾಗವಹಿಸಬೇಕು. ಪ್ರತಿಯೊಬ್ಬರು ಒಂದೊಂದು ಸಸಿ ನೆಡಬೇಕು ಹಾಗೂ ಅದನ್ನು ಪೋಷಿಸಬೇಕು. ಸರ್ವರ ಸಹಭಾಗಿತ್ವದಿಂದ ವೃಕ್ಷೊತ್ಥಾನ ಯಶಸ್ವಿಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ವೃಕ್ಷೊತ್ಥಾನದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು. ಈ ಕುರಿತು ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಒದಗಿಸಬೇಕು. ಎಂದು ಹೇಳಿದರು.
ಶ್ರೀಸಿದ್ದೇಶ್ವರ ಸಂಸ್ಥೆ ಸಂಗು ಸಜ್ಜನ ಅವರು ಮಾತನಾಡಿ, ಸಚಿವ ಎಂ.ಬಿ.ಪಾಟೀಲ ಅವರ ವಿಶೇಷ ಆಸಕ್ತಿಯಿಂದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಆಶರ್ಿವಾದದಿಂದ ಕೋಟಿ ವೃಕ್ಷ ಅಭಿಯಾನ ಯಶಸ್ವಿಯತ್ತ ಸಾಗುತ್ತಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರದ ಕೊಡುಗೆ ನೀಡುವ ನಿಟ್ಟಿನಲ್ಲಿ ಎಲ್ಲರೂ ಜೊತೆಗೂಡಿ ಸಸಿಗಳನ್ನ ನೆಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಾಫ್ ಮ್ಯಾರಾಥಾನ್-2019 ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಮುರುಗೇಶ ಪಟ್ಟಣಶೆಟ್ಟಿ, ಉಪ ಮಹಾಪೌರ ಗೋಪಾಲ ಘಟಕಾಂಬಳೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸ್ವಯಂ ಸೇವಕರು ಇತರರು ಉಪಸ್ಥಿತರಿದ್ದರು