ಲೋಕದರ್ಶನ ವರದಿ
ವಿಜಯಪುರ 26: ನಗರದಲ್ಲಿ ಚೆ ಗುವೆರಾ ಯೂಥ್ ಫೆಡರೇಶನ್ ಸಂಘಟನೆಯ ವತಿಯಿಂದ ಸುಪ್ರಸಿದ್ಧ ಪ್ರವಚನಕಾರ, ಶ್ವೇತಧಾರಿ ಸಂತ, ನಡೆದಾಡುವ ದೇವರು ಎಂದೇ ಕರೆಸಿಕೊಳ್ಳುವ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮದಿನವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.
ರಾಮಪ್ಪ ಸಿಂಗೆ ಮಾತನಾಡಿ ಸಿದ್ದೇಶ್ವರ ಸ್ವಾಮಿಜಿಯವರು ಮಾನವರಲ್ಲ, ಅವರೊಬ್ಬ ದೇವಮಾನವ. ಮನುಷ್ಯ ರೂಪದ ದೇವರು, ದೇವತಾ ಮನುಷ್ಯ. ಅವರು ನಮ್ಮ ಜಿಲ್ಲೆಯವರೆಂಬ ಹೆಮ್ಮೆನಮಗಿದ್ದು ಪ್ರವಚನದ ಮಾತುಗಳು ನಮ್ಮ ಎಲ್ಲ ವಯೋಮಾನದವರ ಜೀವನಕ್ಕೂ ಟಾನಿಕ್ ಇದ್ದಂತೆ. ಹಿಂದೆ ಒಮ್ಮೆ ಅವರನ್ನರಸಿ ಬಂದ ಪದ್ಮಶ್ರೀ ಪ್ರಶಸ್ತಿಯನ್ನು ಅತ್ಯಂತ ಸೌಜನ್ಯದಿಂದಲೇ ನಿರಾಕರಿಸಿದ್ದು ಅವರ ಘನ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.
ಸಂಘಟನೆಯ ಅಧ್ಯಕ್ಷ ಮಂಜುನಾಥ. ಎಸ್.ಕಟ್ಟಿಮನಿ ಮಾತನಾಡುತ್ತಾ ಸ್ವಾಮಿಜಿಯವರು ಜಾತಿ, ಮತ, ಪಂಥಗಳೆನ್ನದೆ ಎಲ್ಲ ವರ್ಗದ, ವಯೋಮಾನದ ಜನರಿಂದಲೂ ಪ್ರೀತಿಸಲ್ಪಡುವ, ಪೂಜಿಸಲ್ಪಡುವ ಶ್ವೇತ ವಸ್ತ್ರಧಾರಿ ಸಂತರಾಗಿದ್ದು, ತಮ್ಮ ಆಧ್ಯಾತ್ಮಿಕ ಮಿಶ್ರಿತ ಲೌಕಿಕ ಜ್ಞಾನವುಳ್ಳ ಪ್ರವಚನದಿಂದ ಹಾಗೂ ವ್ಯಕ್ತಿತ್ವದಿಂದಲೂ ದೇಶ, ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ಎಸ್.ಗಂಜಿ, ಮನೋಹರ ಹೊಸಮನಿ, ಎಮ್.ವೈ.ಹಾದಿಮನಿ, ವಲ್ಯಾಪೂರ, ರಾಹುಲ್ ವಾಗ್ಮೋರೆ, ರಾಮು.ಎಸ್.ಕಟ್ಟಿಮನಿ, ನಿಖಿಲ್ ಜೋಳದ, ಮನೋಜ ಕುಂಬಾರ ಸೇರಿದಂತೆ ಇನ್ನಿತರರು ಇದ್ದರು.