ಲೋಕದರ್ಶನ ವರದಿ
ವಿಜಯಪುರ 27: ಬಸವನ ಬಾಗೇವಾಡಿಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಎರಡು ಸಾವಿರ ಎಕರೆ ಭೂಮಿಯನ್ನು ಕಬಳಿಕೆ ಮಾಡಲಾಗಿದ್ದು, ಈ ಬಗ್ಗೆ ಸಿಐಡಿ ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಾಂಗಿಯಾಗಿ ಧರಣಿ ನಡೆಸುತ್ತಿರುವ ಮಾಜಿ ದಳಪತಿ ಚನ್ನಬಸಪ್ಪ ತಮ್ಮಣ್ಣಪ್ಪ ಗೂಗ್ಯಾಳವರ ಅವರು ತಲೆಯ ಮೇಲೆ ಕಲ್ಲು ಹೊತ್ತು ನಿಂತು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚನಬಸಪ್ಪ ಗೂಗ್ಯಾಳವರ, ಬಸವನ ಬಾಗೇವಾಡಿಯಲ್ಲಿರುವ 2 ಸಾವಿರ ಎಕರೆಯಷ್ಟು ಜಮೀನನ್ನು ನಕಲಿ ದಾಖಲಾತಿ ಸೃಷ್ಟಿಸಿ ಕಬಳಿಕೆ ಮಾಡಿಕೊಳ್ಳಲಾಗಿದೆ. ಅಮೂಲ್ಯವಾದ ಜಮೀನನ್ನು ಕೆಲವು ವ್ಯಕ್ತಿಗಳು ಭೂ-ದಾಖಲೆಗಳ ಕಚೇರಿಯಲ್ಲಿ ಅನಧಿಕೃತವಾಗಿ ದಾಖಲಾತಿ ಸೃಷ್ಟಿಸಿ ಜಮೀನನ್ನು ಕಬಳಿಕೆ ಮಾಡಿದ್ದಾರೆ. 2 ಸಾವಿರ ಎಕರೆಗೆ ಭೂಕಬಳಿಕೆ ಮಾಡಿ ಅಕ್ರಮವಾಗಿ ಹಕ್ಕು ಬದಲಾವಣೆ ಮಾಡಿದ್ದಾರೆ. ಇದು ಒಂದು ದೊಡ್ಡ ಅವ್ಯವಹಾರ ನಡೆದಿದ್ದು ಅನೇಕರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು.
ಸರ್ಕಾರಿ ಜಮೀನು, ಗೋಮಾಳ ಜಮೀನು ಅತಿಕ್ರಮಣಗೊಂಡಿದ್ದರೆ ಭೂ-ಕಬಳಿಕೆ ಮಾಡಿರುವ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಭೂ-ಕಬಳಿಕೆ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ ಸ್ಪಷ್ಟವಾದ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಭೂ-ಕಬಳಿಕೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೆ ಬೆಂಬಲ:
ಭೂಗಳ್ಳರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿರುವ ಚನ್ನಬಸಪ್ಪಾ ತಮ್ಮಣ್ಣ ಗೂಗ್ಯಾಳ (ಮಾಜಿ ದಳಪತಿ) ಅವರಿಗೆ ಕರ್ನಾಟಕದ ರಕ್ಷಣಾ ಪಡೆ ಪದಾಧಿಕಾರಿಗಳು 'ವಿಜಯಪುರದ ಅಣ್ಣಾಹಜಾರೆ' ಎಂಬ ಬಿರುದು ನೀಡಿ ತಲೆಯ ಮೇಲೆ ಮೈಸೂರು ಪೇಠ ಹಾಕಿ, ಕೊರಳಿಗೆ ಶಾಲು, ಹಾರ ಹಾಕಿ ಸನ್ಮಾನಿಸುವ ಮೂಲಕ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಲಿಂಗರಾಜ ಎನ್. ಬಳ್ಳಾರಿ ಮಾತನಾಡಿ, ಸರ್ಕಾರದ 2000 ಎಕರೆ ಜಮೀನನ್ನು ಅಕ್ರಮವಾಗಿ ಕೊಳ್ಳೆ ಹೊಡೆದ ಭೂಗಳ್ಳರ ವಿರುದ್ಧ 72ರ ಇಳಿವಯಸ್ಸಿನಲ್ಲಿ ಚನ್ನಬಸಪ್ಪ ತಮ್ಮಣ್ಣ ಗೂಗ್ಯಾಳ ಅವರು ಏಕಾಂಗಿಯಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅವರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ. ಕೂಡಲೆ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಹುಲ ಠೋನೆ, ವಿರೇಶ ವಾಲಿ, ವಿಷ್ಣು ಹಳ್ಳೂರ, ಮಂಜು ಬಿರಾದಾರ, ರವಿ ಪಾಟೀಲ, ಪುಂಡಲಿಕ್ ಚವ್ಹಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.