ವಿಜಯಪುರ: ಶಾಂತಿ-ಸೌಹಾರ್ದಯುತವಾಗಿ ಹೋಳಿ ಹಬ್ಬ ಆಚರಣೆಗೆ ಮನವಿ

ಲೋಕದರ್ಶನ ವರದಿ

ವಿಜಯಪುರ 20: ಹೋಳಿ ಹಬ್ಬವನ್ನು ಶಾಂತಿ-ಸೌಹಾರ್ದಯುತವಾಗಿ ಆಚರಿಸುವ ಜೊತೆಗೆ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳ ಪರೀಕ್ಷೆ ಇರುವ ಹಿನ್ನಲೆಯಲ್ಲಿ ಪರೀಕ್ಷಾರ್ಥಿಗಳಿಗೆ  ಹಾಗೂ ಪಾಲಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡು ಉತ್ಸಾಹದಿಂದ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮನವಿ ಮಾಡಿಕೊಂಡಿದ್ದಾರೆ. 

ಪೋಲಿಸ್ ಇಲಾಖೆಯ ಚಿಂತನಾ ಸಭಾಂಗಣದಲ್ಲಿಂದು ಶಾಂತಿ ಸಮಿತಿ ಸಭೆ ನಡೆಸಿದ ಅವರು, ಹೋಳಿ ಹಬ್ಬವನ್ನು ಸರ್ವ ಸಮುದಾಯದ ಬಾಂಧವರು ಶಾಂತಿ ಹಾಗೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು. ಇದೇ ಮಾರ್ಚ್  21 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆಗಳು  ಜರುಗಲಿದ್ದು,ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ  ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ಬಣ್ಣ ಹಚ್ಚುವುದಾಗಲಿ ಆಥವಾ ಶಾಲಾ ಆವರಣಗಳ ವ್ಯಾಪ್ತಿಯಲ್ಲಿ ಹಲಗೆ ಬಾರಿಸುವುದನ್ನು ಮಾಡಬಾರದು. ಈ ಹಿನ್ನಲೆಯಲ್ಲಿ ಸರ್ವರೂ ಶಾಂತಿಯುತವಾಗಿ ಈ ಹಬ್ಬ ಆಚರಿಸುವಂತೆ ಮನವಿ ಮಾಡಿದರು. 

ಪರೀಕ್ಷೆ ಕೇಂದ್ರದ ಸುತ್ತಮುತ್ತಲೂ  144 ರನ್ವಯ ನಿಷೇಧಾಜ್ಞೆಯನ್ನು ಸಹ ಜಾರಿಗೊಳಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಪರೀಕ್ಷೆಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಿ ಶಾಂತಿಯುತವಾಗಿ ಹೋಳಿ ಹಬ್ಬ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವವರ ವಿರುದ್ಧ ಪೋಲಿಸ್ ಇಲಾಖೆಯು ಕಟ್ಟುನಿಟ್ಟಿನ ನಿಗಾ ಇಡಲಿದೆ. ಅದರಂತೆ ತಪ್ಪಿತಸ್ಥರ ವಿರುದ್ದವೂ ಸೂಕ್ತ ಕ್ರಮವನ್ನು ಸಹ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. 

ಹೋಳಿ ಹಬ್ಬವನ್ನು ಸೌಹಾರ್ದಯುತ ವಾತಾವರಣದಲ್ಲಿ ಆಚರಿಸುವಂತಾಗಬೇಕು. ಶಾಂತಿಯನ್ನು ಕದಡುವವರ ಬಗ್ಗೆ ಮಾಹಿತಿಯನ್ನು ಪೋಲಿಸ್ ಇಲಾಖೆಗೆ ಸಲ್ಲಿಸಬೇಕು. ವಿಜಯಪುರದಲ್ಲಿ ಈ ಹಿಂದೆ ಹೋಲಿಸಿದಲ್ಲಿ ಟ್ರಾಫೀಕ್ ವ್ಯವಸ್ಥೆ ಪೋಲಿಸ್ ಇಲಾಖೆ ಮುತುವಜರ್ಿಯಿಂದಾಗಿ ತಕ್ಕಮಟ್ಟಿಗೆ ಸುಧಾರಿಸಿದೆ ಎಂದ ಅವರು, ಸಾರ್ವಜನಿಕರೂ ಕೂಡ ಇಂತಹ ಹಬ್ಬದ ಸಂದರ್ಭಗಳಲ್ಲಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯೊಂದಿಗೆ ಅವಶ್ಯಕ ಸಹಕಾರ ನೀಡುವಂತೆ ಮನವಿ ಮಾಡಿದರು. 

ಇಂದು ರಾತ್ರಿ 8 ಗಂಟೆಯಿಂದ ರಾತ್ರಿ 12-30 ಗಂಟೆವರೆಗೆ ಕಾಮದಹನ ನಡೆಯಲಿದ್ದು, ನಾಳೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಮಾ.25 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ರಂಗಪಂಚಮಿಯನ್ನು ಶಾಂತಿಯುತ ವಾತಾವರಣದಲ್ಲಿ ಎಲ್ಲರೂ ಉತ್ಸಾಹದಿಂದ ಯಾರೊಬ್ಬರಿಗೂ ನೋವಾಗದಂತೆ ನೋಡಿಕೊಂಡು ಆಚರಿಸುವಂತೆ ಮನವಿ ಮಾಡಿದರು. 

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರು ಮಾತನಾಡಿ, ಹೋಳಿ ಹಬ್ಬವನ್ನು ಎಲ್ಲರೂ ಸಂಭ್ರಮದ ವಾತಾವರಣದಲ್ಲಿ ಆಚರಿಸಬೇಕು. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರ ಬಗ್ಗೆ ಗಮನಕ್ಕೆ ತರಬೇಕು. ಹೋಳಿ ಹಬ್ಬದ ಸಂದರ್ಭಧಲ್ಲಿ ಪೋಲಿಸ್ ಇಲಾಖೆಯಿಂದ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ, ಅಬಕಾರಿ ಇಲಾಖೆ ಆಯುಕ್ತರು ಸೇರಿದಂತೆ ವಿವಿಧ ಸಮಾಜದ ಮುಖಂಡರಾದ ಅಬ್ದುಲರಜಾಕ ಹೊತರ್ಿ, ಉಮೇಶ ವಂದಾಲ, ಶರಣು ಸಬರದ, ಶಿವಾನಂದ ಭುಯ್ಯಾರ, ದುಂಡಪ್ಪ ಗುಡ್ಡೋಡಗಿ ಉಪಸ್ಥಿತರಿದ್ದರು.