ಲೋಕದರ್ಶನ ವರದಿ
ವಿಜಯಪುರ 20: ರಮೇಶ ಜಿಗಜಿಣಗಿಯವರ ಮನೆಯ ಮುಂದಿನ ರಸ್ತೆ ಮಾಡಿರುವ ನಾವು ಅವರ ಮನೆಯ ಮುಂದೆಯೇ ಕಾಲುವೆಗೆ ನೀರು ಹರಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಯಾವ ನೀರಾವರಿ ಯೋಜನೆಗಳು ಬಾರಾಕಮಾನ ಆಗುವದಿಲ್ಲ. ಆ ರೀತಿ ಆಗಲೂ ನಾನು ಬಿಡುವುದಿಲ್ಲ ಎಂದಿರುವ ಗೃಹ ಸಚಿವ ಎಂ.ಬಿ.ಪಾಟೀಲ್, ವಿಜಯಪುರದ ನೀರಾವರಿ ಯೋಜನೆಗಳು ಬಾರಾಕಮಾನ ಆಗಿವೆ ಎಂಬ ವಿಧಾನಪರಿಷತ್ ಸದಸ್ಯ ಅರುಣ ಶಹಪುರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು "ನನ್ನ ಅವಧಿಯಲ್ಲಿ ಆರಂಭಿಸಿದ ಎಲ್ಲ ಯೋಜನೆಗಳನ್ನು ಪ್ರಸ್ತುತ ಸರ್ಕಾರ ಪೂರ್ಣಗೊಳಿಸಲು ಬದ್ಧವಾಗಿದೆ. ತಿಡಗುಂದಿ ಅಕ್ವಾಡೆಕ್ಟ್ ಏಷ್ಯಾದಲ್ಲಿಯೇ ಮಾದರಿ ಯೋಜನೆಯಾಗಿದ್ದು, ಕೆಲಸ ವಿಳಂಬವಾಗಿರಬಹುದೇ ಹೊರತು ನಿಂತಿಲ್ಲ. ಜುಲೈ ನಂತರದಲ್ಲಿ ತಿಡಗುಂದಿ ಕಾಲುವೆಗೆ ನೀರು ಹರಿದು, ಎಲ್ಲ ಕೆರೆಗಳು ತುಂಬಲಿವೆ. ಇದು ಬಿಜೆಪಿಯವರಿಗೆ ಇಷ್ಟು ಬೇಗ ನೀರಾವರಿ ಕೆಲಸಗಳು ಪೂರ್ಣಗೊಂಡವಲ್ಲ ಎಂದು ಗಾಬರಿ ಹುಟ್ಟಿಸಿದೆ. ವಿಪ ಸದಸ್ಯ ಅರುಣ ಶಹಪುರ ಯೋಜನೆಗಳು ಪೂರ್ಣಗೊಳ್ಳುವವರೆಗೆ ಆತಂಕಕ್ಕೊಳಗಾಗದೆ, ನೆಮ್ಮದಿಯಿಂದ ಇರಲಿ. ಬಹುಶಃ ಅವರು ಮಾಹಿತಿ ಕೊರತೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
"ರಮೇಶ ಜಿಗಜಿಣಗಿ ಅವರ ಮನೆಯ ಮುಂದೆ ನಾವು ರಸ್ತೆ ನಿರ್ಮಿಸಿದಂತೆ, ಅವರ ಮನೆಯ ಮುಂದೆ ಏಷ್ಯಾದ ಅತೀ ದೊಡ್ಡ, ತಾಂತ್ರಿಕತೆಯಲ್ಲಿ ವಿಭಿನ್ನವಾಗಿರುವ ತಿಡಗುಂದಿ ವಯಾಡಕ್ಟ್ ನಲ್ಲಿ ನೀರು ಹರಿಸುತ್ತೇವೆ" ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.