ವಿಜಯವಾಡ, ಮಾ 20 : ಖ್ಯಾತ ತೆಲುಗು ನಟ ಹಾಗೂ ನಿರ್ಮಾಪಕ ಕೋನಿಡೆಲ ನಾಗೇಂದ್ರ ಬಾಬು(ನಾಗ ಬಾಬು) ಬುಧವಾರ ತಮ್ಮ ಸಹೋದರ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಪವನ್ ಕಲ್ಯಾಣ್, ನಾಗಬಾಬು ಅವರಲ್ಲಿನ ರಾಜಕೀಯ ಜಾಣ್ಮೆ ಅರಿತು ಅವರನ್ನು ಪಕ್ಷಕ್ಕೆ ಸೇರಿಸುವಂತೆ ಒತ್ತಡ ಹೇರಿದ್ದೆ. ಅವರಿಗೆ ಪ್ರಸಕ್ತ ರಾಜಕೀಯ ಚಿತ್ರಣದ ಸ್ಪಷ್ಟ ಚಿತ್ರಣವಿದೆ. ಏಪ್ರಿಲ್ 11ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಾಗಬಾಬು ಅವರು ಪೂರ್ವ ಗೋದಾವರಿ ಜಿಲ್ಲೆಯ ನರಸಾಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದರು.
ನಾಗಬಾಬು ಮಾತನಾಡಿ, ತಮ್ಮನ ಒತ್ತಾಯಕ್ಕೆ ಮಣಿದು ಬೇರೆಲ್ಲಾ ಚಟುವಟಿಕೆಗಳನ್ನು ಬದಿಗೊತ್ತಿ ರಾಜಕೀಯ ಪ್ರವೇಶಿಸಿದ್ದೇನೆ ಎಂದರು.
ನಾಗಬಾಬು ಪಕ್ಷ ಸೇರುವ ಕುರಿತು ಬಹಳ ಹಿಂದಿನಿಂದಲೇ ವದಂತಿ ಹರಿದಾಡುತ್ತಿತ್ತು. ಕೆಳ ದಿನಗಳ ಹಿಂದಷ್ಟೇ ಅವರು ಪಕ್ಷದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ನಾಗಬಾಬು ಹಾಗೂ ಪವನ್ ಕಲ್ಯಾಣ್ ಅವರು ಈ ಹಿಂದೆ ಪ್ರಜಾ ರಾಜ್ಯ ಪಕ್ಷ ಸ್ಥಾಪಿಸಿ ನಂತರ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಕೇಂದ್ರ ಸಚಿವ ಕೆ.ಚಿರಂಜೀವಿ ಅವರ ಸಹೋದರರಾಗಿದ್ದಾರೆ.