ವಿಜಯ್ ಮರ್ಚಂಟ್ ಟ್ರೋಫಿ: ಸಂಭಾವ್ಯ ಆಟಗಾರರ ತಂಡದಲ್ಲಿ ರಾಹುಲ್ ದ್ರಾವಿಡ್ ಪುತ್ರ
ಬೆಂಗಳೂರು: ರಾಹುಲ್ ದ್ರಾವಿಡ್ ಅವರ ದ್ವಿತೀಯ ಪುತ್ರ, ವಿಕೆಟ್ ಕೀಪರ್-ಬ್ಯಾಟರ್ ಅನ್ವಯ್ ದ್ರಾವಿಡ್ ಅಂಡರ್-16 ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಾಗಿ ಆರಿಸಲಾದ 35 ಮಂದಿ ಸಂಭಾವ್ಯ ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅನ್ವಯ್ ಈ ತಂಡದ ಮೂವರು ಕೀಪರ್‌ಗಳಲ್ಲಿ ಒಬ್ಬರಾಗಿದ್ದಾರೆ. ಉಳಿದಿಬ್ಬರೆಂದರೆ ಆದಿತ್ಯ ಝಾ ಮತ್ತು ಜಾಯ್ ಜೇಮ್ಸ್. ಅನ್ವಯ್ ಕಳೆದ ವರ್ಷದ ಅಂಡರ್-14 ಇಂಟರ್ ಝೋನ್ ಮೀಟ್‌ನಲ್ಲಿ ಕರ್ನಾಟಕ ತಂಡದ ನೇತೃತ್ವ ವಹಿಸಿದ್ದರು. ಇತ್ತೀಚಿನ ಕೆಎಸ್‌ಸಿಎ ಇಂಟರ್ ಝೋನಲ್ ಕೂಟದಲ್ಲಿ ತುಮಕೂರು ವಲಯ ವಿರುದ್ಧ ಅಜೇಯ 200 ರನ್ ಬಾರಿಸಿ ಮಿಂಚಿದ್ದರು.
ಬಿಸಿಸಿಐ ಆಯ್ಕೆ ಸಮಿತಿಯು ಶನಿವಾರ ಪ್ರಕಟಿಸಿರುವ ಸಂಭವನೀಯರ 35 ಆಟಗಾರರ ಪಟ್ಟಿಯಲ್ಲಿ ಅನ್ವಯ್ ಸೇರಿದಂತೆ ಮೂವರು ವಿಕೆಟ್‌ಕೀಪರ್‌ಗಳಿದ್ದಾರೆ. ಆದಿತ್ಯ ಝಾ ಮತ್ತು ಜಾಯ್ ಜೇಮ್ಸ್ ಅವರೇ ಆ ವಿಕೆಟ್‌ಕೀಪರ್‌ಗಳು.
ಅನ್ವಯ್ ಅವರು 14 ವರ್ಷದೊಳಗಿನವರ ರಾಜ್ಯ ತಂಡದ ನಾಯಕತ್ವ ವಹಿಸಿದ್ದಾರೆ. ಹೋದ ವರ್ಷ ಅಂತರ ವಲಯ ಟೂರ್ನಿಯಲ್ಲಿ ಬೆಂಗಳೂರು ವಲಯ ಪ್ರತಿನಿಧಿಸಿದ್ದ ಅನ್ವಯ್ ಅಜೇಯ ದ್ವಿಶತಕ ಗಳಿಸಿದ್ದರು.
ಅನ್ವಯ್ ಅವರ ಅಣ್ಣ ಸಮಿತ್ ದ್ರಾವಿಡ್ ಅವರು ಕೂಚ್ ಬಿಹಾರ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವಿಜಯ್ ಮರ್ಚ್ ಟ್ರೋಫಿಯಲ್ಲಿ ಆಡಲಿರುವ ರಾಜ್ಯ ತಂಡಕ್ಕೆ ಮಾಜಿ ಆಟಗಾರರಾದ ಕುನಾಲ್ ಕಪೂರ್ ಮತ್ತು ಆದಿತ್ಯ ಬಿ ಸಾಗರ್ ಅವರು ಕ್ರಮವಾಗಿ ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್ ಆಗಿದ್ದಾರೆ.