ಬೆಂಗಳೂರು, ಅ 19: ಎಲೈಟ್ ಎ ಮತ್ತು ಬಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿರುವ ಕರ್ನಾಟಕ ತಂಡ ನಾಳೆ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಮಾಜಿ ನಾಯಕ ಹಾಗೂ ಕನ್ನಡಿಗರೇ ಆದ ವಿನಯ್ ಕುಮಾರ್ ಅವರನ್ನೊಳಗೊಂಡ ಪುದುಚೇರಿ ವಿರುದ್ಧ ಸೆಣಸಲು ಸಿದ್ಧವಾಗಿದೆ. ಕರ್ನಾಟಕ ತಂಡ ಎಲೈಟ್ ಎ ಮತ್ತು ಬಿ ಗುಂಪಿನಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಗೆಲುವಿನ ನಗೆ ಬೀರಿದ್ದು, ಒಂದರಲ್ಲಿ ಸೋಲು ಕಂಡಿದೆ. ಗುಂಪು ಹಂತದಲ್ಲಿ ಒಟ್ಟು 28 ಅಂಕ ಕಲೆ ಹಾಕಿರುವ ಕರ್ನಾಟಕ ಅಗ್ರ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಟವಾಗಿದೆ, ನಾಯಕ ಮನೀಶ್ ಪಾಂಡೆ ಹಾಗೂ ದೇವದತ್ತ ಪಡಿಕ್ಕಲ್ ಅದ್ಭುತ ಲಯದಲ್ಲಿದ್ದಾರೆ. ಮನೀಶ್ ಈಗಾಗಲೇ 505 ರನ್ ಗಳಿಸಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೂ ದೇವದತ್ತ ಪಡಿಕ್ಕಲ್ ಅವರು 456 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ 10ರೊಳಗೆ ಇದ್ದಾರೆ. ಇನ್ನೂ, ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಇರುವುದರಿಂದ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ಬಂದಂತಾಗಿದೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ, ಅಭಿಮನ್ಯು ಮಿಥುನ್ ಹೊಸ ಚೆಂಡಿನಲ್ಲಿ ಎದುರಾಳಿ ಬ್ಯಾಟ್ಸ್ ಮನ್ಗಳ ಮೇಲೆ ಒತ್ತಡ ಹೇರಬಲ್ಲರು. ಸ್ಪಿನ್ ವಿಭಾಗವನ್ನು ಕೆ.ಗೌತಮ್, ಜೆ. ಸುಚಿತ್ ನಿರ್ವಹಿಸಲಿದ್ದಾರೆ. ಇನ್ನೂ, ಪುದುಚೇರಿ ತಂಡ ಪ್ಲೇಟ್ ಗುಂಪಿನಲ್ಲಿ 32 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದೆ. ಆಡಿರುವ ಒಟ್ಟು 9 ಪಂದ್ಯಗಳಲ್ಲಿ ಏಳರಲ್ಲಿ ವಿನಯ್ ನಾಯಕತ್ವದ ಪುದುಚೇರಿ ತಂಡ ಗೆಲುವು ಪಡೆದಿದೆ. ಇದೀಗ ಪುದುಚೇರಿ ಅಂತಿಮ ಎಂಟರ ಘಟ್ಟದ ಹಂತದಲ್ಲಿ ಬಲಿಷ್ಟ ಕರ್ನಾಟಕದ ವಿರುದ್ಧ ಸೆಣಸಲು ಸಜ್ಜಾಗಿದೆ. ಪ್ರಸಕ್ತ ಆವೃತ್ತಿಯ ಆರಂಭದಲ್ಲೇ ಕರ್ನಾಟಕ ತಂಡವನ್ನು ತೊರೆದು ವಿನಯ್ ಕುಮಾರ್ ಪುದುಚೇರಿ ತಂಡಕ್ಕೆ ವಲಸೆ ಹೋಗಿದ್ದರು. ವಿನಯ್ ಕುಮಾರ್ ಅವರನ್ನೊಳಗೊಂಡ ಪುದುಚೇರಿ ಅಮೋಘ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಹಲವು ವರ್ಷಗಳ ಕಾಲ ಕರ್ನಾಟಕ ತಂಡವನ್ನು ಮುನ್ನಡೆಸಿರುವ ವಿನಯ್ ಕುಮಾರ್ ಇದೀಗ ಅದೇ ತಂಡದ ವಿರುದ್ಧ ಪುದುಚೇರಿ ತಂಡದ ಪರ ಆಡಲಿದ್ದಾರೆ. ಹಾಗಾಗಿ, ನಾಳಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ನಿಯಂತ್ರಿಸುವಲ್ಲಿ ವಿನಯ್ ಕುಮಾರ್ ಯಾವ ತಂತ್ರ ರೂಪಿಸಲಿದ್ದಾರೆಂದು ಕಾದು ನೋಡಬೇಕಾಗಿದೆ. ಸಂಭಾವ್ಯ ಆಟಗಾರರು ಕರ್ನಾಟಕ: ಕೆ.ಎಲ್ ರಾಹುಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಮನೀಶ್ ಪಾಂಡೆ(ನಾಯಕ), ಶರತ್ ಬಿ.ಆರ್, ಕೆ.ಗೌತಮ್, ವಿ.ಕೌಶಿಕ್, ರೋಹನ್ ಕದಮ್, ಅಭಿಮನ್ಯು ಮಿಥುನ್, ಪ್ರವೀಣ್ ದುಬೆ, ಜಗದೀಶ್ ಸುಚಿತ್ ಪುದುಚೇರಿ: ವಿನಯ್ ಕುಮಾರ್, ಅರುಣ್ ಕಾರ್ತಿಕ್, ಪರಾಸ್ ದೊಗ್ರಾ, ಸುರೇಶ್ ಕುಮಾರ್, ಸಾಗರ್ ತ್ರಿವೇದಿ, ಫಾಬಿದ್ ಅಹಮದ್, ಎಸ್. ಕಾರ್ತಿಕ್ (ವಿ.ಕೀ), ವಿಘ್ಞೇಶ್ವರನ್ ಮಾರಿಮುತ್ತು, ಆಶಿತ್, ದಾಮೋದರನ್ ರೋಹಿತ್(ನಾಯಕ), ಸಾಗರ್ ಉದೇಶಿ ಸಮಯ: ನಾಳೆ ಬೆಳಗ್ಗೆ 09:00 ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.