ಮಂಗಳೂರು, ಏ.6, ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ದ್ವೀಪ ಹಚ್ಚುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗುಂಪೊಂದು ಅಲ್ಪಸಂಖ್ಯಾತರ ಮನೆಗಳಿಗೆ ಕಲ್ಲು ತೂರಾಟ ನಡೆಸಿರುವ ಘಟನೆ ಕಳೆದ ರಾತ್ರಿ ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಪೆರ್ಲಪು ಪ್ರತಾಪ್‌ನಗರದಲ್ಲಿ ನಡೆದಿದೆ.ಕೊರೋನಾ ವಿರುದ್ಧದ ಹೋರಾಟದಲ್ಲಿ ಐಕ್ಯತೆ ಪ್ರದರ್ಶಿಸಲು ಏಪ್ರಿಲ್ 5ರಂದು ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ದೇಶದ ಜನರು ದ್ವೀಪ ಹಚ್ಚುವಂತೆ ಪ್ರಧಾನಿ ಮನವಿ ಮಾಡಿದ್ದರು. ದೀಪ ಹಚ್ಚುವ ಅಭಿಯಾನದ ಬಳಿಕ ಗುಂಪೊಂದು ಅಲ್ಪಸಂಖ್ಯಾತರ ಮನೆಗಳಿರುವ ಕಾಲೊನಿಗೆ ಆಗಮಿಸಿ ಸಿಡಿಮದ್ದೊಂದನ್ನು ಎಸೆದಿದ್ದರು. ಆ ಬಳಿಕ ರಾತ್ರಿ 11 ಗಂಟೆಯ ಸುಮಾರಿಗೆ ಹಲವು ಮನೆಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಬಂದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.