ಬರಹಗಾರನಿಗೆ ಪದಬಳಕೆ ಅರಿವು ಅತ್ಯಗತ್ಯ: ಬರಗೂರು ರಾಮಚಂದ್ರಪ್ಪ

ಬೆಂಗಳೂರು, ಡಿ.14 ಬರಹಗಾರನಿಗೆ ಇತಿಹಾಸ, ಭಾಷಾ ಪ್ರೌಢಿಮೆ, ಪದ ಬಳಕೆ ಪ್ರಯೋಗದ ಅರಿವು ಅತ್ಯವಶ್ಯಕ ಎಂದು ಖ್ಯಾತ ಸಾಹಿತಿ ಬರಗೂರು ಡಾ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.  ನಗರದ ಪ್ರಕರ್ತರ ಭವನದಲ್ಲಿ ಸಾಹಿತಿ ಯಡೂರ ಮಹಾಬಲ ಬರೆದ 1962ರ ಭಾರತ ಚೀನಾ ಯುದ್ಧಕ್ಕೆ ಸಂಬಂಧಪಟ್ಟ ಯುದ್ಧಕಾಂಡ ಹಾಗೂ ಯುದ್ಧ ಪೂರ್ವಕಾಂಡ ಪುಸ್ತಕ ಬಿಡುಗಡೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಲೇಖಕ ಸೂಕ್ಷ, ಸಂವೇದನಾ ಶಿಲತೆಯ ಗಂಭೀರ ಅಧ್ಯಯನದೊಂದಿಗೆ ಕೃತಿ ರಚಿಸಬೇಕು. ಭೂತ ವರ್ತಮಾನ ಕಾಲದ‌ ನಡುವಿನ ಅನುಸಂಧಾನಗಳನ್ನು ಮರುಚಿಂತನೆಗೆ ಒಳಪಡಿಸಿ ಕೃತಿ ರಚಿಸಿದಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ ಎಂದು‌‌ ಅಭಿಪ್ರಾಯಪಟ್ಟರು.ಯಡೂರ ಮಹಾಬಲ ಅವರ ಕೃತಿಗಳಲ್ಲಿ ಸಂಶೋಧನೆ, ಅಧ್ಯಯನ ಶೀಲತೆ ಕಂಡು ಬರುತ್ತವೆ. ಅಂದಿನ ದಿನಗಳ ವೈರುದ್ಯತೆ ಸ್ಥಿತಿಗತಿಗಳನ್ನು‌ ಅರ್ಥಪೂರ್ಣವಾಗಿ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕೃತಿಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಇತ್ತೀಚಿನ ದಿನಗಳಲ್ಲಿ ಸಂಶೋಧನೆಗಳು ಪಿಎಚ್ ಡಿ ಪದವಿ ಪಡೆಯಲಷ್ಟೇ ಸೀಮಿತವಾಗಿರುವುದು ವಿಪರ್ಯಾಸ. ಪ್ರತಿಷ್ಠಿತ ಪತ್ರಿಕೆಗಳಲ್ಲಿ ತಾವು ಬರೆದ ವರದಿ ಪ್ರಕಟಿತವಾದರೆ ಪಿಎಚ್ ಡಿ ಬರುತ್ತದೆ ಎಂಬುದು ಸರಿಯಲ್ಲ. ಲೇಖಕರು ಸತತ ಅಧ್ಯಯನ ಶೀಲರಾಗುವುದು ಮುಖ್ಯ ಎಂದು ವಿವರಿಸಿದರು.ಬೃಹತ್ ರಾಷ್ಟ್ರಗಳಿಗೆ ಯುದ್ಧ ಎನ್ನುವುದು ವ್ಯಾಪಾರೀಕರಣವಾಗಿದೆ. ಶಾಂತಿ ಮಂತ್ರ ಪಠಿಸುತ್ತಲೇ ಯುದ್ಧ ಮಾಡುತ್ತಿರುವ ದೇಶಗಳು ಭಯೋತ್ಪಾದನೆ, ಯುದ್ಧೋತ್ಪಾದನೆ ಹುಟ್ಟು ಹಾಕಿವೆ. ಇಂತಹ ಸರ್ವಾಧಿಕಾರಿ ಮನೋಭಾವ ಸರಿಯಲ್ಲ. ರಾಜಪ್ರಭುತ್ವದಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಮುಂದಾದರೆ ಪ್ರಜಾಪ್ರಭುತ್ವದಲ್ಲಿ ಗಡಿ‌ವಿಸ್ತರಣೆಯೇ ಮಾನದಂಡಗಳಾಗಿವೆ. ಇವೆರಡು ಬೇರೆ ಬೇರೆಯಾದರೂ ವಿಷಯಗಳ ಪರಿಕಲ್ಪನೆ ಮಾತ್ರ ಒಂದೇ ಆಗಿದೆ ಎಂದರು.ಕನ್ನಡದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಕೃತಿಗಳು ಪ್ರಕಟವಾಗಿರುವುದು ಬಹಳ ಕಡಿಮೆ. 1962ರ ಚೀನಾ ಮತ್ತು ಭಾರತದ ನಡುವಿನ ಯುದ್ಧದ ಪರಿಸ್ಥಿತಿ ಹಾಗೂ ಅದಕ್ಕೆ ಕಾರಣವನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಇತಿಹಾಸದ ಪರಿಕಲ್ಪನೆಯನ್ನು ಯುವಪೀಳಿಗೆಗೆ ತಿಳಿಸಲು ಇಂತಹ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಬೇಕು‌ ಎಂದು‌ ತಿಳಿಸಿದರು.ಈ ಸಂದರ್ಭದಲ್ಲಿ ಪತ್ರಿಕೆ ಸಂಪಾದಕ ಸಿದ್ಧನಗೌಡಪಾಟೀಲ, ಸಿಐಟಿಯು ಸಂಘಟಕ ಪ್ರಕಾಶ್ ಕೃಷ್ಣಪ್ಪ, ರೈತಮುಖಂಡ ಜೆ.ಎಂ ಗಂಗಣ್ಣ, ಡಾ.ಬಿ.ಆರ್ ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಮತ್ತಿತರರಿದ್ದರು.