ಪಾಲಕ್ಕಾಡ್, ನ. 5: ದಲಿತ ಬಾಲಕಿಯರನ್ನು ಅತ್ಯಾಚಾರವೆಸಗಿ ಕೊಲೆಗೈದ ವಲಯಾರ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ಎನ್ಸಿಎಸ್ಸಿ) ಸೋಮವಾರ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥ (ಎಸ್ಪಿಸಿ) ಲೋಕನಾಥ್ ಬೆಹೆರಾ ಅವರಿಗೆ ನವೆಂಬರ್ 11 ರಂದು ವೈಯಕ್ತಿಕ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ. 'ಸಾಕ್ಷ್ಯಾಧಾರದ ಕೊರತೆ' ಹಿನ್ನೆಲೆಯಲ್ಲಿ ವಲಯಾರ್ನಲ್ಲಿ ಇಬ್ಬರು ದಲಿತ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಎನ್ಸಿಎಸ್ಸಿ ಉಪಾಧ್ಯಕ್ಷ ಎಲ್. ಮುರುಗನ್ ತಿಳಿಸಿದ್ದಾರೆ. ಆರೋಪಿಗಳನ್ನು ಖುಲಾಸೆಗೊಳಿಸಲು ಕಾರಣ ಮತ್ತು ಲೋಪಗಳ ಬಗ್ಗೆ ಹಾಗೂ ಉನ್ನತ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಗೊಳಗಾಗಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಆಯೋಗವು ಬಯಸಿದೆ ಎಂದು ಅವರು ಹೇಳಿದರು. ಅಕ್ಟೋಬರ್ 25 ರಂದು ಪಾಲಕ್ಕಾಡ್ನ ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರ 11 ಮತ್ತು ಒಂಬತ್ತು ವರ್ಷ ವಯಸ್ಸಿನ ದಲಿತ ಸಹೋದರಿಯರ ಕುಟುಂಬಕ್ಕೆ ನ್ಯಾಯ ಕೋರಿ ಕೇರಳದಲ್ಲಿ ಸಾರ್ವಜನಿಕರ ಆಕ್ರೋಶ ಮತ್ತು ಪ್ರತಿಭಟನೆ ಭುಗಿಲೆದ್ದಿತು. ಬಲಿಯಾದವರು ವಲಯಾರ್ ಬಳಿಯ ಅತ್ತಪಲ್ಲಂ ಮೂಲದವರು. ಅವರು ಕ್ರಮವಾಗಿ 2017 ರ ಜನವರಿ ಮತ್ತು ಮಾರ್ಚ್ನ್ಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮರಣೋತ್ತರ ವರದಿಗಳು ತಿಳಿಸಿದ್ದವು.ರಾಜಕೀಯ ಒತ್ತಡದಲ್ಲಿ ಪೊಲೀಸರು ಆಡಳಿತ ಪಕ್ಷಕ್ಕೆ ಸೇರಿದ ಆರೋಪಿಗಳಿಗೆ ಪ್ರಾಸಿಕ್ಯೂಷನ್ ಪ್ರಕರಣವನ್ನು ದುರ್ಬಲಗೊಳಿಸುವ ಮೂಲಕ ಸಹಾಯ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.