ಬೆಂಗಳೂರು, ಮಾ.26, ಕೋವಿಡ್-19; ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ 2019-20ನೇ ಶೈಕ್ಷಣಿಕ ವರ್ಷದ ಶಾಲಾಹಂತದ ಎಲ್ಲಾ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಿ ಒಂದರಿಂದ ಒಂಭತ್ತನೇ ತರಗತಿಯ ಎಲ್ಲಾ ಮಕ್ಕಳನ್ನು 2020-21ನೇ ಶೈಕ್ಷಣಿಕ ವರ್ಷದ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ತಮ್ಮ ನಿರ್ದೇಶನದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಪರೀಕ್ಷೆಗಳನ್ನು ಮುಂದೂಡಿದ ಕ್ರಮ ಅತ್ಯಂತ ಸಕಾಲಿಕ ಮತ್ತು ಮಂಜಾಗ್ರತೆಯ ತೀರ್ಮಾನವಾಗಿದೆ. ವಿಶೇಷವಾಗಿ, ಮಕ್ಕಳು ಈ ವೈರಸ್ ಗೆ ಸುಲಭವಾಗಿ ತುತ್ತಾಗುವ ದೃಷ್ಟಿಯಿಂದ ತಮ್ಮ ನಿರ್ಧಾರ ದೂರಾಲೋಚನೆಯ ತೀರ್ಮಾನವಾಗಿದೆ. ಕೊರೊನಾ ವೈರಸ್ ಭೀತಿಯನ್ನು ಸಮರ್ಥವಾಗಿ ಎದುರಿಸಲು ತಮ್ಮ ಸಾರಥ್ಯದಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳು ಸಕಾಲಿಕ ಮತ್ತು ಅಭಿನಂದನಾರ್ಹ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ಭೀತಿ ಈಗಾಗಲೇ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದು ‘ನನಗೆ ನನ್ನ ಕುಟುಂಬಕ್ಕೆ ಏನಾಗಬಹುದೋ’ ಎಂಬ ಆತಂಕ ಮತ್ತು ಭಯವನ್ನು ಸೃಷ್ಟಿಸಿದೆ. ಇದನ್ನು ಅರಿತ, ಕೇಂದ್ರ ಸರ್ಕಾರದ ಕೇಂದ್ರೀಯ ಶಾಲೆಗಳ ಕೇಂದ್ರೀಯ ವಿದ್ಯಾಲಯಗಳ ಸಂಘಟನೆಯು ತನ್ನ ಶಾಲೆಗಳಲ್ಲಿನ 1 ರಿಂದ 8 ನೇತರಗತಿಯ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿ ಪತ್ರ ಬರೆದಿದೆ. ವೈದ್ಯಕೀಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗದಿದ್ದರೂ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕೆಂದು ಅದು ಸೂಚಿಸಿದೆ.
ಜೊತೆಗೆ ಈಗಾಗಲೇ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ , ತಮಿಳುನಾಡು ಮುಂತಾದ ರಾಜ್ಯಗಳು 1 ರಿಂದ 8/9 ನೇತರಗತಿಯ ಎಲ್ಲಾ ಮಕ್ಕಳನ್ನು ಯಾವುದೇ ಪರೀಕ್ಷೆಯಿಲ್ಲದೆ ಮುಂದಿನ ತರಗತಿಗಳಿಗೆ ತೇರ್ಗಡೆಗೊಳಿಸುವಂತೆ ಸೂಚಿಸಿ ಆದೇಶಗಳನ್ನು ಹೊರಡಿಸಿವೆ. ವಿಶೇಷವಾಗಿ ಗುಜರಾತ್ ಸರ್ಕಾರವು 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡಲು ನಿರ್ಧರಿಸಿದೆ. ಕೊರೋನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿಯವರು 1ರಿಂದ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ತೀರ್ಮಾನಿಸಿದ್ದಾರೆ. ಈ ಮೂಲಕ ಮಕ್ಕಳು 2020-21 ಶೈಕ್ಷಣಿಕ ವರ್ಷಕ್ಕೆ ಯಾವುದೇ ಆತಂಕವಿಲ್ಲದೆ ಹೋಗಬಹುದಲ್ಲದೆ ಇಡೀ ದೇಶವೆ ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಬಂಧಾಗಿರುವ ಈ ಸಂದರ್ಭದಲ್ಲಿ ಆತಂಕವಿಲ್ಲದೆ ನೆಮ್ಮದಿಯಿಂದ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಸಹಾಯವಾಗುತ್ತದೆ.
ಪರಿಸ್ಥಿತಿ ಹೀಗಿರುವಾಗ ನಮ್ಮ ರಾಜ್ಯದಲ್ಲಿ ಶಿಕ್ಷಣ ಇಲಾಖೆಯು ಇಂದು (26.03.2020) ಸುತ್ತೋಲೆಯೊಂದನ್ನು ಹೊರಡಿಸಿ 7 ರಿಂದ 9ನೇ ತರಗತಿಯ ಪರೀಕ್ಷೆಗಳ ದಿನಾಂಕಗಳನ್ನು 20.04.2020ರ ನಂತರ ಪ್ರಕಟಿಸುವುದಾಗಿ ತಿಳಿಸಿದೆ. ಸರ್ಕಾರದ ಈ ನಿರ್ಧಾರ ಮಕ್ಕಳು ಮತ್ತು ಪಾಲಕರನ್ನು ಅತಂತ್ರ ಮತ್ತು ಗೊಂದಲಕ್ಕೆ ಈಡು ಮಾಡಿದ್ದು ಮಕ್ಕಳಲ್ಲಿ ಒತ್ತಡ ಮತ್ತು ಖಿನ್ನೆತೆಯನ್ನುಂಟು ಮಾಡುವ ಸಾಧ್ಯತೆ ಇದೆ.
10/12 ನೇ ತರಗತಿಗೆ ಮಂಡಳಿ/ಸಾರ್ವಜನಿಕ ಪರೀಕ್ಷೆ ನಡೆಸುವ ಔಚಿತ್ಯ ಮತ್ತು ಅಗತ್ಯತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ. ಕಾರಣ ಅದು ಶೈಕ್ಷಣಿಕ ವ್ಯವಸ್ಥೆಯ ಒಂದು ಘಟ್ಟಕ್ಕೆ ನಿರ್ಣಾಯಕ ಪರೀಕ್ಷೆಯಾಗಿರುತ್ತದೆ. ಆದರೆ , 7 ರಿಂದ 9ನೇ ತರಗತಿಯ ಪರೀಕ್ಷೆಗಳು ಶಾಲಾ ಹಂತದ ತರಗತಿ ವಾರ್ಷಿಕ ಪರೀಕ್ಷೆಗಳಾಗಿದ್ದು ,ಇಂಥಹ ಕಠಿಣ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ಭಯವನ್ನು ಸೃಷ್ಟಿಸುತ್ತಿರವುದು ಮಕ್ಕಳ ಮಾನಸಿಕ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಅನಾವಶ್ಯಕವಾಗಿ ಆತಂಕ ಮತ್ತು ದುಗುಡವನ್ನು ಸೃಷ್ಟಿಸಿ ಕುಟುಂಬದಲ್ಲಿ ಅನಾವಶ್ಯಕ ಅತಂಕವನ್ನುಂಟುಮಾಡುತ್ತದೆ.
ಈ ಎಲ್ಲಾ ಕಾರಣಗಳಿಂದ ,ಅನ್ಯ ರಾಜ್ಯಗಳಾದ ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ , ತಮಿಳುನಾಡು ಮುಂತಾದ ರಾಜ್ಯಗಳು ಮಕ್ಕಳ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ತೀರ್ಮಾನವನ್ನು ಅನುಸರಿಸಿ ನಮ್ಮ ರಾಜ್ಯದಲ್ಲಿಯೂ 2019-20ನೇ ಶೈಕ್ಷಣಿಕ ವರ್ಷದ ಎಲ್ಲಾ ಶಾಲಾ ಹಂತದ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಿ ಒಂದರಿಂದ ಒಂಭತ್ತನೇ ತರಗತಿಯ ಎಲ್ಲಾ ಮಕ್ಕಳನ್ನು 2020-21 ನೇ ಶೈಕ್ಷಣಿಕ ವರ್ಷದ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುವ ಬಗ್ಗೆ ಸರ್ಕಾರ ಕೂಡಲೇ ತೀರ್ಮಾನ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಇಂದಿನ ಕಠಿಣ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಮನೋಸ್ಥೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕೇ ಹೊರತು ಮತ್ತೊಮ್ಮೆ ಪರೀಕ್ಷೆ ಭಯ ಹುಟ್ಟಿಸುವ ಮತ್ತು ಅವರನ್ನು ಗೊಂದಲಕ್ಕೆ ದೂಡುವ ಕ್ರಮ ಸರಿಯಲ್ಲವೆಂಬುದನ್ನು ವಿನಯಪೂರ್ವಕವಾಗಿ ತಮ್ಮ ಗಮನಕ್ಕೆ ತರಬಯಸುತ್ತೇನೆ . ಮಕ್ಕಳ ಪರ ಮುಖ್ಯಮಂತ್ರಿಗಳಾದ ತಾವು ಕೂಡಲೇ ಈ ಬಗ್ಗೆ ತೀರ್ಮಾನಿಸಬೇಕೆಂದು ವಿನಂತಿಸುತ್ತೇನೆ ಎಂದು ನಿರಂಜನಾರಾಧ್ಯ ಮನವಿ ಮಾಡಿದ್ದಾರೆ.