ಲಖನೌ, ಫೆ 3,ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಡಿಸೆಂಬರ್‍ನಲ್ಲಿ ನಡೆದ ಭಾರೀ ಪ್ರಮಾಣದ ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆಯ 108 ಕಾರ್ಯಕರ್ತರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಇಲ್ಲಿ ನಡೆದ ಜಂಟಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನೇಶ್ ಅವಸ್ಥಿ ಮತ್ತು ಡಿಜಿಪಿ ಹಿತೇಶ್ ಚಂದ್ರ ಅವಸ್ಥಿ, ವಿಶೇಷ ಕಾರ್ಯಾಚರಣೆ ನಡೆಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪಿಎಫ್‍ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಹಿಂದೆ ಸಂಘಟನೆ ಸಕ್ರಿಯವಾಗಿರುವ ರಾಜ್ಯದ 13 ಜಿಲ್ಲೆಗಳಲ್ಲಿ ಸಂಘಟನೆಯ 25 ಮಂದಿ ಪದಾಧಿಕಾರಿಗಳನ್ನು ಬಂಧಿಸಲಾಗಿತ್ತು.
ಕಳೆದ ನಾಲ್ಕು ದಿನಗಳಲ್ಲಿ ಲಖನೌನಲ್ಲಿ 14, ಸೀತಾಪುರದಲ್ಲಿ 3, ಮೀರತ್‍ನಲ್ಲಿ 21, ಗಾಜಿಯಾಬಾದ್ ನಲ್ಲಿ 9, ಮುಜಾಫರ್‍ನಗರದಲ್ಲಿ 6, ಶಾಮ್ಲಿಯಲ್ಲಿ 7, ಬಿಜ್ನೋರ್ ನಲ್ಲಿ 4, ವಾರಾಣಸಿಯಲ್ಲಿ 20, ಕಾನ್ಪುರದಲ್ಲಿ 5, ಗೊಂಡಾದಲ್ಲಿ ಒಬ್ಬ, ಬಹ್ರಿಯಾಚ್ ನಲ್ಲಿ 16 ಹಾಗೂ ಮತ್ತು ಹಾಪುರ್ ಮತ್ತು ಜಾನ್‍ಪುರ್ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ. ವಿವಿಧ ಮೂಲಗಳಿಂದ ಹಣವನ್ನು ಪಡೆದ ಸಂಘಟನೆ, ರಾಜ್ಯದಲ್ಲಿ ಹಿಂಸಾಚಾರವನ್ನು ನಡೆಸಲು ಪ್ರತಿಭಟನಾಕಾರರಿಗೆ ಹಂಚಿರುವುದು ಸಾಬೀತಾಗಿದೆ ಎಂದು ಅವರು ಹೇಳಿದರು.