ರಾಯಚೂರು ಪರಿಸರದಲ್ಲಿ ಕನ್ನಡ ಭಾಷೆಯೊಂದಿಗೆ ಉರ್ದು ಭಾಷಾ ಬಳಕೆ

ರಾಯಚೂರ 05: “ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಮತ್ತು ವ್ಯವಹಾರಿಕವಾಗಿ ರಾಯಚೂರು ಪರಿಸರದ ಕನ್ನಡದ ಮೇಲೆ ಉರ್ದುವಿನ ಪ್ರಭಾವವಿದೆ” ಎಂದು ಸಂಶೋಧಕರಾದ ಶ್ರೀದೇವಿ ಅವರು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಅ. 03 ರಂದು ಹಮ್ಮಿಕೊಂಡಿದ್ದ 267ನೇ ಆನ್‌ಲೈನ್ ವಾರದಮಾತು ಕಾರ್ಯಕ್ರಮದಲ್ಲಿ “ರಾಯಚೂರು ಪರಿಸರದಲ್ಲಿ ಕನ್ನಡ ಭಾಷೆಯೊಂದಿಗೆ ಉರ್ದು ಭಾಷಾ ಬಳಕೆ” ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.  

ಅವರು ರಾಯಚೂರು ಪ್ರದೇಶದಲ್ಲಿ ಬಹುಸಂಖ್ಯಾತರ ಭಾಷೆ ಕನ್ನಡವಾಗಿತ್ತು. ನಿಜಾಮರು ಉರ್ದು ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಿಸಿ ಉರ್ದು ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿದ್ದರು. ಇದರ ಪರಿಣಾಮದಿಂದ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವ್ಯವಹಾರಿಕವಾಗಿ ಉರ್ದುವಿನ ಒಡನಾಟವನ್ನು ಮುಖ್ಯವಾಗಿ ಮಧ್ಯಮವರ್ಗ, ಕೆಳವರ್ಗದ ವ್ಯಕ್ತಿನಾಮಗಳಲ್ಲಿ, ಬೈಗುಳಗಳಲ್ಲಿ, ಸಂಖ್ಯಾವಾಚಕಗಳು ಮತ್ತು ಪರಿಮಾಣವಾಚಕಗಳಲ್ಲಿ ಕನ್ನಡ-ಉರ್ದು ಭಾಷಿಕ ಬಳಕೆಯನ್ನು ಗುರುತಿಸಬಹುದೆಂದು ಅವರು ಹೇಳಿದರು.  

ವ್ಯಕ್ತಿನಾಮಗಳಲ್ಲಿ ಜಲಾಲಿ, ಮೌಲಾಲಿ, ಅಬ್ಬಾಸಾಲಿ, ಹುಸೇನಿ, ಫಕೀರ ಎಂದು, ಬೈಗುಳಗಳಲ್ಲಿ ಬದ್ಮಾಶ್, ಹರಾಮ್ ಎಂದು, ಸಂಖ್ಯಾವಾಚಕಗಳಲ್ಲಿ ಏಕ್, ಸೌ, ಬಾರಾ, ಎಂದು ಪರಿಮಾಣ ವಾಚಕಗಳಲ್ಲಿ ಪಾವ್ ಎಂಬ ಪದಗಳ ಬಳಕೆಯನ್ನು ಉದಾಹರಣೆಯಾಗಿ ವಿವರಿಸಿದರು.  

ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಮಹದೇವಯ್ಯ ಅವರು, ಸಂಶೋಧನಾರ್ಥಿ ಶಿಲ್ಪಾ ಹೆಚ್‌.ವಿ ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ, ಅಂಬಿಕಾ ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾ ವಿದ್ಯಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.