ಸಾಮಾಜಿಕ ಜಾಲತಾಣದಿಂದ ಸಾಂಸ್ಕೃತಿಕ ಕಲೆಗಳು ಕಣ್ಮರೆಯಾಗುತ್ತಿವೆ : ಕೆ.ವೀರಭದ್ರ ಗೌಡ

ಕಂಪ್ಲಿ 15: ಮೊಬೈಲ್, ಟಿ.ವಿ, ಧಾರವಾಹಿ, ಸಾಮಾಜಿಕ ಜಾಲತಾಣದಿಂದ ದೇಶದ ಇತಿಹಾಸದ ಪರಂಪರೆ ತಿಳಿಸುವ ಸಾಂಸ್ಕೃತಿಕ ಕಲೆಗಳು ಕಣ್ಮರೆಯಾಗುತ್ತಿವೆ. ಇಂತಹ ನಾಟಕಗಳಲ್ಲಿ ಯುವ ಸಮುದಾಯ ಹೆಚ್ಚಾಗಿ ಭಾಗವಹಿಸಿ ಸಾಂಸ್ಕೃತಿಕ ಕಲೆಗಳನ್ನು ಗಟ್ಟಿಗೊಳಿಸುವಲ್ಲಿ ಮುಂದಾಗಬೇಕು ಎಂದು ಸಮಾಜ ಸೇವಕ ಕೆ.ವೀರಭದ್ರ ಗೌಡ  ಅಭಿಪ್ರಾಯ ವ್ಯಕ್ತಪಡಿಸಿದರು.  

ಅವರು ಪಟ್ಟಣ ಸಮೀಪದ ಬಾದನಹಟ್ಟಿ ಗ್ರಾಮದ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ವದ್ದಟ್ಟಿ ರಂಗ ಬಸವೇಶ್ವರ ಕಲಾ ಟ್ರಸ್ಟ್‌ ವತಿಯಿಂದ ಸಂಜೆ ಹಮ್ಮಿಕೊಂಡಿದ್ದ ದಸರಾ ಗ್ರಾಮೀಣ ರಂಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಇಂಥಹ ಕಲೆ ಇರುವುದು ವಿಶೇಷವಾಗಿದೆ.  

ಪೌರಾಣಿಕ ನಾಟಕಗಳು ಕೇವಲ ಮನರಂಜನೆಗಾಗಿ ಉಳಿಯದೇ ಸಮಾಜಮುಖಿಯಾಗಿ ಸಮಾಜದ ಪರಿವರ್ತನೆಗೆ ನಾಟಕಗಳು ಪ್ರದರ್ಶನಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುವ ಸಮುದಾಯಗಳು ನಾಟಕಗಳಲ್ಲಿ ಉತ್ಸಾಹದಿಂದ ಅಭಿನಯಿಸುತ್ತಿರುವುದು ಕಲೆ ಉಳಿವಿಗಾಗಿ ಸಾಕ್ಷಿಯಾಗಿದೆ. ಇದರಿಂದ ಸ್ವಾಸ್ಥ್ಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದರು. ರಂಗ ಬಸವೇಶ್ವರ ಕಲಾ ಟ್ರಸ್ಟ್‌ ಕಾರ್ಯದರ್ಶಿ ಹುಲಗಯ್ಯ ನಾಯಕರ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆಗಳು ಉಳಿವಿಗಾಗಿ ಇಂತಹ ಬಯಲು ನಾಟಕ, ಸುಗಮ ಸಂಗೀತ ಸೇರಿದಂತೆ ಇನ್ನಿತರ ರಂಗಭೂಮಿಯ ಕಲಾವಿದರಿಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು. 

ಅದರಲ್ಲೂ ಬಾದನಹಟ್ಟಿ ಗ್ರಾಮದ ಜನರು ಕಲೆಗೆ ಬಹಳಷ್ಟು ಪ್ರೋತ್ಸಾಹ ನೀಡುವುದು ಹಾಗೂ ಇಂತಹ ಕಾರ್ಯಕ್ರಮದಲ್ಲಿ ನೂರಾರು ಜನ ಸೇರಿರುವುದು ನೋಡಿದರೆ ಕಲೆ ನಮ್ಮ ದೇಶದಲ್ಲಿ ಗಟ್ಟಿಯಾಗಿದೆ ಎಂದು ಸಂತಸವಾಗಿದೆ ಎಂದರು. ನಂತರ ಗ್ರಾಮ ಪಂಚಾಯತಿ ಅಧ್ಯಕ್ಷ ಕರಿಬೇಡರ ಕರೆಣ್ಣ ಮಾತನಾಡಿದರು. 

ಪ್ರಾರಂಭದಲ್ಲಿ ಮುದ್ದಟನೂರು ತಿಪ್ಪೇಸ್ವಾಮಿ ಮತ್ತು ತಂಡದ ವತಿಯಿಂದ ಬಯಲಾಟದ ರಂಗ ಗೀತೆಗಳು, ಬಾದನಹಟ್ಟಿ ಕೆ.ಯರ್ರಿನಾಗೇಶ್ ಮತ್ತು ತಂಡದ ವತಿಯಿಂದ ಸುಗಮ ಸಂಗೀತ, ನಾಟ್ಯ ಭೈರವಿ ಕಲಾ ಕೇಂದ್ರದ ವತಿಯಿಂದ ಭರತ ನಾಟ್ಯ ಸಮೂಹ ನೃತ್ಯ, ಎಮ್ಮಿಗನೂರು ಜಡೇಶ್ ತಂಡದ ವತಿಯಿಂದ ಜನಪದ ಗಾಯನ ಹಾಗೂ ಬಾದನಹಟ್ಟಿ ಕರಿಬಸವನಗೌಡ ತಂಡದ ವತಿಯಿಂದ ಭಕ್ತ ಪ್ರಹ್ಲಾದ ಬಯಲು ನಾಟಕ ಅದ್ಭತವಾಗಿ ಪ್ರದರ್ಶನ ಮೂಡಿಬಂದವು. ಬಯಲು ನಾಟಕದಲ್ಲಿ ಸ್ತ್ರೀ ಪಾತ್ರ ವೈಟ್ ಸುಮ ಕೂಡ್ಲಿಗಿ ಅದ್ಭುತವಾಗಿ ಪ್ರದರ್ಶನ ಮಾಡಿದರು. 

ಈ ಸಂದರ್ಭದಲ್ಲಿ ಬಯಲಾಟದ ಉಸ್ತುವಾರಿ ಪಿ.ಕರೆಣ್ಣ, ಮುಖಂಡರಾದ ಕೆ.ಭೀಮಣ್ಣ, ಕಲ್ಲುಕಂಭ ಕರ್ಣಾಚಾರಿ, ಸಿದ್ದಮ್ಮನಹಳ್ಳಿ ಕರಿಬಸಪ್ಪ, ಹುಲುಗಪ್ಪ, ಎಂ.ಬುಡ್ಡಪ್ಪ, ಕರಿಬಸವನಗೌಡ, ಅಂಜಿನಪ್ಪ, ಪಾಂಡು, ಗ್ರಾಮದ ಮುಖಂಡರು, ಕಲಾವಿಧರು, ಕಲಾಭಿಮಾನಿಗಳು, ಕಲಾಪ್ರೇಕ್ಷಕರು ಹಾಗೂ ಇತರರು ಇದ್ದರು.