ಜೆಎನ್ ಯುನಲ್ಲಿ ಹಿಂಸಾಚಾರ ನಡೆಸಿದ ಮುಸುಕುಧಾರಿಗಳ ಮುಸುಕು ಅನಾವರಣ ಜಾವಡೇಕರ್

ನವದೆಹಲಿ, ಜ 8 ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ನಲ್ಲಿ ಹಿಂಸಾಚಾರವನ್ನು ಖಂಡಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು, ಹಿಂಸಾಚಾರ ನಡೆಸಿದ ಮುಸುಕುಧಾರಿಗಳ ಮುಸುಕು ಕಳಚಲಾಗುವುದು ಎಂದು ಹೇಳಿದ್ದಾರೆ. ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ವಿವರಿಸಿದ ಅವರು, ಪೊಲೀಸರು ವಿಶ್ವವಿದ್ಯಾಲಯದಲ್ಲಿನ ಹಿಂಸಾಚಾರ ಕುರಿತು ತನಿಖೆ ನಡೆಸುತ್ತಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರನ್ನು ಬಯಲಿಗೆಳೆಯಲಾಗುವುದು ಎಂದು ಹೇಳಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಹಿಂಸಾಚಾರ ನಡೆದರೂ ಅದು ಖಂಡನೀಯ. ಹಿಂಸಾಚಾರಕ್ಕೆ ಜಾಗವಿಲ್ಲ. ವ್ಯಾಸಂಗಕ್ಕಾಗಿ ವಿದ್ಯಾಥರ್ಿಗಳು ಹೋಗುವ ಶಿಕ್ಷಣಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆಯಲೇಬಾರದು ಎಂದು ಅವರು ಹೇಳಿದ್ದಾರೆ. ಜೆಎನ್ ಯುನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಿಗೆ ಬೆಂಬಲ ಸೂಚಿಸಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಂಗಳವಾರ ಸಂಜೆ ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ತೆರಳಿದ್ದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಸತ್ತಾತ್ಮಕ ದೇಶದಲ್ಲಿ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಹೇಳಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಕುರಿತು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಾಳಿಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಪರವಾಗಿ ಎಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಿಂಸಾಚಾರದಲ್ಲಿ ಕೆಲ ಪ್ರಾದ್ಯಾಪಕರು ಸೇರಿದಂತೆ 30 ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಭಾನುವಾರ ಸಂಜೆ ಮುಸುಕು ಧರಿಸಿದ್ದ ದುಷ್ಕರ್ಮಿಗಳು ಯೋಜಿತ ರೀತಿಯಲ್ಲಿ ವಿಶ್ವವಿದ್ಯಾಲಯಕ್ಕೆ ನುಗ್ಗಿ ಹಾಸ್ಟೆಲ್ ಗಳಲ್ಲಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದರು.