ಮೋದಿಗೆ ಗೋಚರಿಸದ ಸೂರ್ಯಗ್ರಹಣ

ನವದೆಹಲಿ, ಡಿ26, ದೇಶದ ಸಹಸ್ರಾರು ಜನರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಉತ್ಸುಕರಾಗಿ ಗುರುವಾರದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಸಜ್ಜಾಗಿದ್ದರಾದರೂ, ಮೋಡ ಕವಿದಿದ್ದರಿಂದ ಅವರಿಗೆ ಗ್ರಹಣದ ದರ್ಶನವಾಗಲಿಲ್ಲ. ಆದರೆ, ಮೋದಿ ಅವರು ಕೋಳಿಕ್ಕೋಡ್ ನಲ್ಲಿ ಗೋಚರಗೊಂಡ ಗ್ರಹಣದ ಕೆಲ ದೃಶ್ಯಗಳನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಹಲವು ಭಾರತೀಯರಂತೆ ನಾನು ಕೂಡ ಸೂರ್ಯಗ್ರಹಣ2019 ಅನ್ನು ನೋಡಲು ಉತ್ಸುಕನಾಗಿದ್ದೆ. ದುರದೃಷ್ಟವಶಾತ್, ಮೋಡಗಳ ಕಾರಣದಿಂದ ಅದನ್ನು ನೋಡಲಾಗಲಿಲ್ಲ. ಆದರೆ ನೇರ ಪ್ರಸಾರದಿಂದ ಕೋಳಿಕ್ಕೋಡ್ ನ ಸೂರ್ಯಗ್ರಹವನ್ನು ವೀಕ್ಷಿಸಲು ಸಾಧ್ಯವಾಯಿತು’ ಎಂದಿದ್ದಾರೆ. ಸೂರ್ಯಗ್ರಹಣದ ಕುರಿತು ತಜ್ಞರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದು, ಹಲವು ವಿಷಯಗಳನ್ನು ತಿಳಿದುಕೊಂಡಿರುವೆ ಎಂದಿರುವ ಮೋದಿ, ಈ ಕುರಿತು ಚಿತ್ರಗಳನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ. ಬೆಳಗ್ಗೆ 8.17ರಿಂದ 10.57ರವರೆಗೆ ಭಾರತದ ದಕ್ಷಿಣ ಭಾಗ, ಸೌದಿ ಅರೆಬಿಯಾ, ಕತಾರ್, ಅರಬ್ ಒಕ್ಕೂಟ, ಓಮನ್, ಶ್ರೀಲಂಕಾ, ಮಲೇಶಿಯಾ ಮತ್ತು ಇಂಡೋನೇಷಿಯಾ ದೇಶಗಳಲ್ಲಿ ಗೋಚರವಾಗಿದೆ.