ನವದೆಹಲಿ, ನ 5: ದೆಹಲಿಯ ತೀಸ್ ಹಜಾರಿ ಕೋರ್ಟ್ ಬಳಿ ಇತ್ತೀಚಿಗೆ ವಕೀಲರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆ ತೀವ್ರ ವಿವಾದ ಸೃಷ್ಟಿಯಾಗಿರುವ ಬೆನ್ನಲ್ಲೇ ಪೊಲೀಸರು ಮಂಗಳವಾರ ಪ್ರತಿಭಟನೆಗೆ ಮುಂದಾಗಿದ್ದಾರೆ. ಅರಕ್ಷಕರ ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಪೊಲೀಸ್ ವೃತ್ತಿ ಕೃತಜ್ಞತೆಯಿಲ್ಲದ ಕೆಲಸ ವಾಗಿದೆ ಎಂದು ಹೇಳಿದ್ದಾರೆ. ಯಾರೂ ಕಾನೂನುಗಳನ್ನು ಕೈಗೆತ್ತಿಕೊಳ್ಳಬಾರದು. ಆದರೆ, ಕಾನೂನು ತನ್ನದೇ ಆದ ರೀತಿಯಲ್ಲಿ ಮುಂದುವರಿಯಲಿದೆ ಎಂದು ಸಚಿವ ರಿಜಿಜು ಟ್ವೀಟ್ ಮಾಡಿದ್ದಾರೆ ಪೊಲೀಸ್ ವೃತ್ತಿ ಕೃತಜ್ಞತೆಯಿಲ್ಲದ ಉದ್ಯೋಗ. ಆದರೆ ಪೊಲೀಸರು ಕೃತಜ್ಞತೆಗಾಗಿ ತಮ್ಮ ಕೆಲಸ ನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ ಅವರ ಮೊದಲ ಅವಧಿಯ ಸಚಿವ ಸಂಪುಟದಲ್ಲಿ 2014 ರಿಂದ 2019 ನಡುವೆ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಕಿರಣ್ ರಿಜಿಜು, ಪೊಲೀಸರು ಪ್ರತಿದಿನ ತಮ್ಮ ಕರ್ತವ್ಯಗಳಿಗಾಗಿ ಬದುಕು ಸವೆಸುತ್ತಾರೆ. ಕರ್ತವ್ಯ ನಿರ್ವಹಿಸಿದರೂ ಅವರನ್ನು ದೂರುತ್ತಾರೆ, ಕರ್ತವ್ಯ ನಿರ್ವಹಿಸದಿದ್ದರೂ ದೂಷಣೆ ಮಾಡುತ್ತಾರೆ ಎಂದು ಹೇಳಿದ್ದಾರೆ. ನವಂಬರ್ 2 ರಂದು ದಹಲಿಯ ತೀಸ್ ಹಜಾರಿ ಕೋರ್ಟ್ ಬಳಿ ವಕೀಲರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆ ಘಟನೆ ವಿರುದ್ದ ಭಾರಿ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳ ಸದಸ್ಯರು ಪೊಲೀಸ್ ಕೇಂದ್ರ ಕಚೇರಿ ಬಳಿ ಗದ್ದಲದ ಪ್ರತಿಭಟನೆ ನಡೆಸಿ, ಕೇವಲ ಪೊಲೀಸ್ ಅಧಿಕಾರಿಗಳ ವಿರುದ್ದ ಮಾತ್ರ ಕ್ರಮ ಜರುಗಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಿಕ್, ಪೊಲೀಸ್ ಸಿಬಂದಿಯ ನ್ಯಾಯಬದ್ದ ಕುಂದುಕೊರತೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ನಮಗೆ ನ್ಯಾಯ ಬೇಕು ಎಂಬ ಘೋಷಣೆ ಕೂಗಿ ಫಲಕ ಹಿಡಿದು ಪೊಲೀಸರು ಪ್ರತಿಭಟನೆ ನಡೆಸಿದರು.