ನವದೆಹಲಿ, ಜ ೨೮ : ಬಿಹಾರ ರಾಜಕೀಯ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ನವ ಪೀಳಿಗೆಯ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನಡುವಣ ಭಿನ್ನಾಭಿಪ್ರಾಯ ಮಂಗಳವಾರ ಬಹಿರಂಗಗೊಂಡಿದೆ.
ಪ್ರಶಾಂತ್ ಕಿಶೋರ್ ವಿರುದ್ದ ನಿತೀಶ್ ಕುಮಾರ್ ಮಂಗಳವಾರ ಕಿಡಿಕಾರಿದ್ದು, ಜೆಡಿಯು ಪಕ್ಷದಲ್ಲಿ ಮುಂದುವರಿಯುವುದಾದರೆ ಇರಿ, ಇಲ್ಲವಾದರೆ, ಪಕ್ಷ ಬಿಟ್ಟು ಹೊರಹೋಗಬಹುದು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಪಕ್ಷದಲ್ಲಿ ಮುಂದುವರಿಯಬೇಕಾದರೆ, ಜೆಡಿಯು ಪಕ್ಷದ ನೀತಿ ನಿಯಮಗಳಿಗೆ ಬದ್ದವಾಗಿರಬೇಕು. ಇಲ್ಲವಾದರೆ ಪಕ್ಷ ಬಿಟ್ಟು ಹೋಗಬಹುದು ಎಂದು ಪ್ರಶಾಂತ್ ಕಿಶೋರ್ ಅವರಿಗೆ ನಿತೀಶ್ ಕುಮಾರ್ ಕಟುಮಾತಿನ ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆ, ತಕ್ಷಣವೇ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, ತಾವು ಬಿಹಾರಕ್ಕೆ ಬಂದು ಸೂಕ್ತ ಉತ್ತರ ನೀಡುವುದಾಗಿ, ಸ್ವಲ್ಪ ಸಮಯ ಕಾದು ನೋಡಿ ಎಂದು ಉತ್ತರಿಸಿದ್ದಾರೆ. ಬಿಹಾರದ ಇತ್ತೀಚಿನ ರಾಜಕೀಯ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ.
ಅಲ್ಲದೆ, ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಹಲವಾರು ವಿವಾದಾತ್ಮಕ ಕಾಯ್ದೆಗಳನ್ನು, ಪ್ರಶಾಂತ್ ಕಿಶೋರ್ ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ. ಆದೇ ರೀತಿ ನಿತೀಶ್ ಕುಮಾರ್.. ಈಗ ಎನ್‌ಡಿಎ ಮೈತ್ರಿಕೂಟದ ಮಿತ್ರರಾಗಿಯೇ ಮುಂದುವರಿದಿದ್ದಾರೆ. ಪ್ರಶಾಂತ್ ಕಿಶೋರ್ ಬಿಜೆಪಿ ವಿರೋಧಿಸುವ ಪಕ್ಷಗಳ ಬೆಂಬಲಕ್ಕೆ ನಿಂತಿದ್ದಾರೆ. ಟ್ವಿಟರ್ ಮೂಲಕ ಕೇಂದ್ರ ಸರ್ಕಾರ ನೀತಿಗಳಿಗೆ ತೀವ್ರ ರೀತಿಯ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ... ಅಲ್ಲ ಬಿಜೆಪಿ ತೀವ್ರ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಪ್ರಶಾಂತ್ ಕಿಶೋರ್ ತಲೆ ತೂರಿಸಿದ್ದಾರೆ. ಆಪ್ ಸಂಚಾಲಕ ಅರವಿಂದ ಕೇಜ್ರೀವಾಲ್ ಕೇಜ್ರಿವಾಲ್ ಗೆ ರಾಜಕೀಯ ತಂತ್ರಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು .. ದೆಹಲಿಯಲ್ಲಿ ಎಎಪಿ ವಿಜಯಕ್ಕಾಗಿ ಪ್ರಬಲ ಯೋಜನೆ ಹಣಿಯುತ್ತಿದ್ದಾರೆ. ... ಆದೇ ರೀತಿ ಎಎಪಿ ಪರವಾಗಿ ಚುನಾವಣಾ ಪ್ರಚಾರ ನಡೆಸುವುದಾಗಿಯೂ ಘೋಷಿಸಿದ್ದಾರೆ.
ಮತ್ತೊಂದೆಡೆ, ಪ್ರಶಾಂತ್ ಕಿಶೋರ್, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನಿಲುವುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೊಡ್ಡ ಪ್ರಮಾಣದ ಅಭಿಯಾನ ನಡೆಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ಪ್ರಶಾಂತ್ ಕಿಶೋರ್ ಟ್ವೀಟ್ ಮೂಲಕ ಅಭಿನಂಧಿಸಿದ್ದರು. ಈವರೆಗೂ ಚೆನ್ನಾಗಿಯೇ ಇದ್ದ .... ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಶಾಂತ್ ಕಿಶೋರ್ ನಡುವೆ ದೆಹಲಿ ಚುನಾವಣೆ ಪ್ರಚಾರದ ಭಾಗವಾಗಿ ವಾಕ್ ಸಮರ ನಡೆಯುತ್ತಿದೆ. ಷಾಹೀನ್ ಬಾಗ್ ಕುರಿತು ಇಬ್ಬರು ಸೋಷಿಯಲ್ ಮಾಧ್ಯಮಗಳಲ್ಲಿ ವ್ಯಂಗ್ಯಾಸ್ತ್ರ ಬಳಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಭಾರತೀಯ ಜನತಾ ಪಕ್ಷ ನಾಯಕತ್ವ ಪ್ರಶಾಂತ್ ಕಿಶೋರ್ ಅವರ ನಡವಳಿಕೆಯ ಬಗ್ಗೆ ಆಕ್ರೋಶಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಅತನ್ನು ನಿಯಂತ್ರಿಸುವಂತೆ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ನಾಯಕರು ತೀವ್ರ ಒತ್ತಡತಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಶಾಂತ್ ಕಿಶೋರ್ ವಿರುದ್ದ ನಿತೀಶ್ ಕುಮಾರ್ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಶಾಂತ್ ರಾಜೀನಾಮೆ ನೀಡುತ್ತಾರೋ ಅಥವಾ ಜೆಡಿಯು ತ್ಯಜಿಸುತ್ತಾರೋ ಅಥವಾ ನಿತೀಶ್ ಕುಮಾರ್ ಗೆ ಸೂಕ್ತ ಸಮಜಾಯಿಷಿ ನೀಡುತ್ತಾರೋ ಎಂಬುದು ಚರ್ಚೆಯ ವಿಷಯವಾಗಿದೆ. ಆದರೆ, ಅಂತಿಮವಾಗಿ ಇದು ಎಲ್ಲಿಗೆ ಕೊಂಡೊಯ್ಯುವುದೂ ಎಂಬುದು ಕುತೂಹಲಕಾರಿಯಾಗಿದೆ.