ದಾಖಲೆಯ ಮಳೆಯ ಜೊತೆಗೆ 154 ಜಿಲ್ಲೆಗಳಲ್ಲಿ ಅನಾವೃಷ್ಠಿ..

ನವದೆಹಲಿ,  ಅ 3:   ಈ ಬಾರಿಯ ಮುಂಗಾರು ಕಳೆದ  25 ವರ್ಷಗಳಲ್ಲೇ ಗರಿಷ್ಠ, ದಾಖಲೆಯ ಮಳೆಯಾಗಿ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಇನ್ನೂ 154 ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದಾಗಿ ಬರ ಪರಿಸ್ಥಿತಿಯೂ ಎದುರಾಗಿದೆ.  ದೇಶದ 675 ಜಿಲ್ಲೆಗಳ ಪೈಕಿ ಶೇಕಡ 23 ಜಿಲ್ಲೆಗಳಲ್ಲಿ ಅಂದರೆ 154 ಜಿಲ್ಲೆಗಳಲ್ಲಿ ಮಳೆಯ ಕೊರತೆಯಿದೆ ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳು ಹೇಳುತ್ತಿವೆ. ಈ ಪೈಕಿ 12 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳು ಉತ್ತರ, ಪೂರ್ವ ಹಾಗೂ ಈಶಾನ್ಯ ಭಾರತಕ್ಕೆ ಸೇರಿವೆ.  ವಾಡಿಕೆ ಮಳೆಗಿಂತ ಶೇಕಡ  20 ರಿಂದ 59ರಷ್ಟು ಕಡಿಮೆ ಮಳೆಯಾದ ಜಿಲ್ಲೆಗಳನ್ನು ಅತಿವೃಷ್ಟಿಪೀಡಿತ ಜಿಲ್ಲೆಗಳೆಂದು ಹವಾಮಾನ ಇಲಾಖೆ ನಿರ್ಧರಿಸುತ್ತದೆ. ಶೇಕಡ 60ಕ್ಕಿಂತ ಕಡಿಮೆ ಮಳೆಯಾದಲ್ಲಿ ಅದನ್ನು ತೀವ್ರ ಅಭಾವ ವರ್ಗಕ್ಕೆ ಸೇರಿಸಲಾಗುತ್ತದೆ. ಹರಿಯಾಣದಲ್ಲಿ  ಗರಿಷ್ಠ ಅಂದರೆ 21 ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದ್ದು, ಮೂರು ಜಿಲ್ಲೆಗಳಲ್ಲಿ ತೀವ್ರ ಅಭಾವ ತಲೆದೋರಿದೆ. ಮಳೆ ಅಭಾವ ಇರುವ ಮೂರನೇ ಒಂದರಷ್ಟು ಜಿಲ್ಲೆಗಳು ಅಂದರೆ 52 ಜಿಲ್ಲೆಗಳು ಅತ್ಯಧಿಕ ಕೃಷಿ ಉತ್ಪತ್ತಿ ಇರುವ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಹಾಗೂ ದೆಹಲಿಗೆ ಸೇರಿದ ಜಿಲ್ಲೆಗಳು. ಈ ಪ್ರದೇಶದಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.