ಅಂಡರ್ 19 ವಿಶ್ವಕಪ್: ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತ-ಆಸ್ಟ್ರೇಲಿಯಾ ಫೈಟ್

ಪೊಚೆಫ್‌ಸ್ಟ್ರೂಮ್, ಜ.27 :           19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದ್ದು, ಗೆಲುವಿನ ವಿಶ್ವಾಸ ಹೊಂದಿದೆ. 

ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನೀಯವಾಗಿ ಎಂಟರ ಘಟ್ಟ ಪ್ರವೇಶಿಸಿದೆ. ಆಸೀಸ್ ಬಿ ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದೆ. ಟೀಮ್ ಇಂಡಿಯಾ ಈ ಬಾರಿಯೂ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಅಂಗಳಕ್ಕೆ ಇಳಿಯಲಿದೆ.

ಯಶಸ್ವಿ ಬಲ 

ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜಸ್ವಾಲ್ ತಂಡದ ಬ್ಯಾಟಿಂಗ್ ಗೆ ಬಲ ತುಂಬಿದ ಆಟಗಾರ. ಆಡಿದ ಮೂರು ಪಂದ್ಯಗಳಲ್ಲಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಅವರು ಎರಡು ಅರ್ಧಶತಕ ಸೇರಿದಂತೆ 145 ರನ್ ಬಾರಿಸಿ ಮಿಂಚಿದ್ದಾರೆ. ಉಳಿದಂತೆ ದಿವ್ಯಾಂಶ್ ಸಕ್ಸೇನಾ (75), ನಾಯಕ ಪ್ರೀಯಂ ಗರ್ಗ್ (56), ತಿಲಕ್ ವರ್ಮಾ (46), ಧೃವ್ ಜುರೇಲ್ (52) ತಂಡಕ್ಕೆ ಬ್ಯಾಟಿಂಗ್ ನಲ್ಲೂ ನೆರವಾಗಬಲ್ಲರು. 

ಬೌಲಿಂಗ್ ವಿಭಾಗದಲ್ಲಿ ರವಿ ಬಿಷ್ಣೋಯಿ ತಮ್ಮ ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ಅಥರ್ವ್ ರನ್ ಗಳಿಗೆ ಕಡಿವಾಣ ಹಾಕುವ ಕ್ಷಮತೆ ಹೊಂದಿದ್ದಾರೆ.

ನಾಯಕ ಮ್ಯಾಕೆಂಜಿ ಹಾರ್ವೆ, ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬ್ಯಾಟಿಂಗ್ ಗೆ ಬಲ ತುಂಬ ಬಲ್ಲ ಆಟಗಾರರು. ಬೌಲಿಂಗ್ ನಲ್ಲಿ ತನ್ವೀರ್ ಸಂಘಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

ಮಂಗಳವಾರ ನಡೆಯುವ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.