ಜೋಹಾನ್ಸ್ ಬರ್ಗ್, ಫೆ.3 : ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧ ಬಹಳ ಸಮಯದಿಂದ ಮುರಿದುಬಿದ್ದಿದ್ದರೂ ಐಸಿಸಿ ಪಂದ್ಯಾವಳಿಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಲೇ ಇವೆ. ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ಮಂಗಳವಾರ ಅಂಡರ್ -19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಹಿರಿಯ ತಂಡಗಳು ಹೋರಾಟ ನಡೆಸಿದ್ದವು. ಇದರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡ ಡಕ್ವರ್ತ್ ಲೂಯಿಸ್ ನಿಯಮದಂತೆ ಪಾಕಿಸ್ತಾನವನ್ನು 89 ರನ್‌ಗಳಿಂದ ಸೋಲಿಸಿತ್ತು.
ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಎರಡೂ ದೇಶಗಳ ಅಂಡರ್ -19 ತಂಡಗಳು ಈಗ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಭಾರತದ ಸವಾಲನ್ನು ಪಾಕ್ ಎದುರಿಸಲಿದೆ.
ಭಾರತ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 90 ರನ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನ ಸ್ಕಾಟ್‌ಲ್ಯಾಂಡ್‌ನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಜಪಾನ್ ಜೊತೆಗಿನ ಎರಡನೇ ಪಂದ್ಯವನ್ನು ಭಾರತ 10 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮತ್ತೊಂದೆಡೆ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧದ ಎರಡನೇ ಪಂದ್ಯವನ್ನು 38 ರನ್‌ಗಳಿಂದ ಗೆದ್ದುಕೊಂಡಿತ್ತು. ಡಕ್ವರ್ತ್-ಲೂಯಿಸ್ ನಿಯಮದಂತೆ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಅಬ್ಬರಿಸಿತು.
ಕ್ವಾರ್ಟರ್ ಫೈನಲ್ಸ್ನಲ್ಲಿ ಭಾರತ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಅವರ ಮಾರಣಾಂತಿಕ ಬೌಲಿಂಗ್ ದಾಳಿ ನಡೆಸಿ ಆಸ್ಟ್ರೇಲಿಯಾವನ್ನು 74 ರನ್‌ಗಳಿಂದ ಸೋಲಿಸಿತ್ತು. ಪಾಕಿಸ್ತಾನ ಆರು ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಮಣಿಸಿ ಸೆಮಿಫೈನಲ್ಸ್ ಗೆ ಪ್ರವೇಶಿಸಿತು. ಫೆಬ್ರವರಿ 9 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ಉಭಯ ತಂಡಗಳು ಫೈಟ್ ನಡೆಸಲಿವೆ.
ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು, ಎಲ್ಲರ ಗಮನ ಸೆಳೆದಿದೆ. ಟೀಮ್ ಇಂಡಿಯಾದ ಯಶಸ್ವಿ ಜಸ್ವಾಲ್, ಧ್ರುವ್, ಪ್ರೀಯಂ ಗರ್ಗ್ ಬ್ಯಾಟಿಂಗ್ ಗೆ ಆಧಾರವಾಗಬಲ್ಲ ಆಟಗಾರರು. ಈ ಆಟಗಾರರು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಮತ್ತೊಮ್ಮೆ ಪ್ರಶಸ್ತಿ ಸುತ್ತಿನತ್ತ ಹೆಜ್ಜೆ ಹಾಕುವ ಕನಸು ಕಾಣುತ್ತಿದೆ.