ಪುಣ. 12: ಹಿರಿಯ ವೇಗಿ ಉಮೇಶ್ ಯಾದವ್(27 ಕ್ಕೆ 3) ಹಾಗೂ ಮೊಹಮ್ಮದ್ ಶಮಿ (28 ಕ್ಕೆ 2) ಅವರ ಮಾರಕ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತದ ವಿರುದ್ಧ ಭಾರಿ ಅಂತರದ ಹಿನ್ನಡೆಯ ಭೀತಿಗೆ ಸಿಲುಕಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೂರು ವಿಕೆಟ್ ಕಳೆದುಕೊಂಡು 36 ರನ್ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 42 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ. ಇದರೊಂದಿಗೆ ಇನ್ನು, 465 ರನ್ ಹಿನ್ನಡೆಯಲ್ಲಿದ್ದು, ಕೈ ಯಲ್ಲಿ ನಾಲ್ಕು ವಿಕೆಟ್ ಮಾತ್ರ ಇದೆ. ಶನಿವಾರ ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ಆನ್ರಿಚ್ ನಾಡ್ಜ್ ಹಾಗೂ ಥ್ಯೂನಿಸ್ ಡಿ ಬ್ರೂಯಿನ್ ಅವರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಆನ್ರಿಚ್ ನಾಡ್ಜ್ ಕೇವಲ ಮೂರು ರನ್ ಗಳಿಸಿ ಮೊಹಮ್ಮದ್ ಶಮಿ ಎಸೆತದಲ್ಲಿ ವೃದ್ದಿಮನ್ ಸಾಹ ಅವರಿಗೆ ಕ್ಯಾಚ್ ನೀಡಿದರು. ಒಂದು ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಥ್ಯೂನಿಸ್ ಡಿ ಬ್ರೂಯಿನ್ ಅವರು 58 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 30ರನ್ ಗಳಿಸಿದರು. ಆ ಮೂಲಕ ದೊಡ್ಡ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದರು. ಆದರೆ, ಅವರನ್ನು ಉಮೇಶ್ ಯಾದವ್ಗೆ ಔಟ್ ಆದರು. ನಂತರ ಜತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ ಮುರಿಯದ ಆರನೇ ವಿಕೆಟ್ಗೆ ಅದ್ಭುತ ಬ್ಯಾಟಿಂಗ್ ಮಾಡಿತು. ಭಾರತದ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಬಹಳ ಎಚ್ಚರಿಕೆಯಿಂದ ಪ್ರದರ್ಶನ ನೀಡಿತು. ಇವರಿಬ್ಬರು ಮುರಿಯದ ಆರನೇ ವಿಕೆಟ್ಗೆ 75 ರನ್ ಕಲೆಹಾಕಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. 48 ಎಸೆತಗಳಲ್ಲಿ 31 ರನ್ ಗಳಿಸಿ ಭರವಸೆ ಮೂಡಿಸಿದ್ದ ಕ್ವಿಂಟನ್ ಡಿ ಕಾಕ್ ಅವರು ಆರ್. ಅಶ್ವಿನ್ ಕ್ಲೀನ್ ಬೌಲ್ಡ್ ಮಾಡಿದರು. ಡುಪ್ಲೆಸಿಸ್ ಅರ್ಧ ಶತಕ: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯಕ ಫಾಫ್ ಡುಪ್ಲೆಸಿಸ್ ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದೆ ಸುಲಲಿತವಾಗಿ ಬ್ಯಾಟಿಂಗ್ ಮಾಡಿದರು. 76 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ ಎಂಟು ಬೌಂಡರಿಯೊಂದಿಗೆ ಅಜೇಯ 52 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಮುತ್ತುಸ್ವಾಮಿ ಆರು ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಸಂಕ್ಷಿಪ್ತ ಸ್ಕೋರ್ (ಭೋಜನ ವಿರಾಮ) ಭಾರತ ಪ್ರಥಮ ಇನಿಂಗ್ಸ್: 601/5 (ಡಿ) ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್: 42 ಓವರ್ ಗಳಲ್ಲಿ 136/6 (ಫಾಫ್ ಡುಪ್ಲೆಸಿಸ್ ಔಟಾಗದೆ 52, ಕ್ವಿಂಟನ್ ಡಿ ಕಾಕ್ 31, ಥ್ಯೂನಿಸ್ ಡಿ ಬ್ರೂಯಿನ್ 30; ಉಮೇಶ್ ಯಾದವ್ 27 ಕ್ಕೆ 3, ಮೊಹಮ್ಮದ್ ಶಮಿ 28 ಕ್ಕೆ 2, ಆರ್. ಅಶ್ವಿನ್ 28 ಕ್ಕೆ 1)