ಪಂಚಾಚಾರ್ಯರ ಸಭೆಗೆ ಉಜ್ಜಯಿನಿ, ಶ್ರೀಶೈಲ ಮತ್ತು ಕಾಶಿ ಪೀಠಗಳ ಒಪ್ಪಿಗೆ
ಹುಬ್ಬಳ್ಳಿ 05: ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮೇ-7 ರಂದು ಗದಗ ಜಿಲ್ಲೆಯ ಮುಕ್ತಿಮಂದಿರದಲ್ಲಿ ಕರೆದಿರುವ ಶ್ರೀಜಗದ್ಗುರು ಪಂಚಾಚಾರ್ಯರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಉಜ್ಜಯಿನಿ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಶ್ರೀಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿ, ರಾಜ್ಯ ಸರ್ಕಾರ ಕೈಗೊಳ್ಳಲು ಮುಂದಾದ ಜಾತಿ ಗಣತಿ ವಿಚಾರದಲ್ಲಿ ಬಹುಸಂಖ್ಯಾತ ವೀರಶೈವ-ಲಿಂಗಾಯತ ಜನಸಂಖ್ಯೆಯನ್ನು ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಗುರುತಿಸಿರುವುದನ್ನು ಮತ್ತು ಕೇಂದ್ರ ಸರ್ಕಾರವೇ ಇಂದು ಜಾತಿಗಣತಿಗೆ ಮುಂದಾಗಿರುವ ಸಂದರ್ಭದಲ್ಲಿ ಸಮಸ್ತ ವೀರಶೈವ-ಲಿಂಗಾಯತ ಸಮಾಜಕ್ಕೆ ಶಕ್ತಿ ಲಭಿಸುವಲ್ಲಿ ಎಲ್ಲಾ ಉಪ ಪಂಗಡಗಳನ್ನು ಒಟ್ಟು ಸಂಖ್ಯೆಯೊಂದಿಗೆ ಗುರುತಿಸಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಸಮಾಜದ ಉಪ ಪಂಗಡಗಳಿಗೆ ಸಿಗುವ ಮಾನ್ಯತೆ ಮತ್ತು ಸೌಲಭ್ಯಗಳ ವಿಚಾರಗಳನ್ನೇ ಪ್ರಧಾನವಾಗಿ ಚರ್ಚಿಸಲು ತನ್ಮೂಲಕ ವೀರಶೈವ-ಲಿಂಗಾಯತ ಸಮಾಜದ ಸಮಷ್ಟಿ ಹಿತವನ್ನು ಕಾಪಾಡಲು ಮೊದಲ ಆದ್ಯತೆಯಲ್ಲಿ ಪರಿಗಣಿಸಿ ಕರೆದಿರುವ ಈ ಸಭೆಯು ಅತೀ ಮಹತ್ವದ್ದೆಂದು ಭಾವಿಸಿ ತಾವೆಲ್ಲರೂ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ. ಪಂಚಪೀಠಗಳ ಈ ಹಿಂದಿನ ಸಭೆಗಳಲ್ಲಿ ಚರ್ಚಿತ ಯಾವುದೇ ವಿಚಾರಗಳನ್ನು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಜರುಗುತ್ತಿರುವ ಸಭೆಯಲ್ಲಿ ಪುನಃ ಚರ್ಚೆಗೆ ಪರಿಗಣಿಸದೇ, ಈ ಸಭೆಯು ಕೇವಲ ವೀರಶೈವ-ಲಿಂಗಾಯತ ಸಮಾಜದ ಒಗ್ಗಟ್ಟು ಮತ್ತು ಶ್ರೇಯೋಭಿವೃದ್ಧಿಯ ಚರ್ಚೆಗೆ ಮಾತ್ರ ಮೀಸಲಾಗಿರಬೇಕು. ವಿನೂತನ ಆಶಯಗಳೊಂದಿಗೆ ವೀರಶೈವ-ಲಿಂಗಾಯತ ಸಮಾಜದ ಸಮಷ್ಟಿ ಹಿತವನ್ನೇ ಕೇಂದ್ರೀಕರಿಸಿ ಎಲ್ಲಾ ಪೀಠಾಚಾರ್ಯರು ವಿಸ್ತೃತ ವಿಚಾರಗಳನ್ನು ಹೊಸೆದು ಈ ಸಭೆಯು ವೀರಶೈವ-ಲಿಂಗಾಯತ ಸಮಾಜದ ವಿಕಾಸಕ್ಕೆ ಹೊಸ ಭಾಷ್ಯ ಬರೆಯುವಂತಾಗಬೇಕೆಂದು ಉಜ್ಜಯಿನಿ, ಶ್ರೀಶೈಲ ಮತ್ತು ಕಾಶಿ ಪೀಠಗಳ ಜಗದ್ಗುರುಗಳು ಸಲಹೆ ನೀಡಿದ್ದಾರೆ.