ಉಡುಪಿ, ಫೆ 8 : ಬೆಳೆ ಸಾಲವನ್ನು ಹೆಚ್ಚಿನ ಜನರು ಪಡೆಯದಿರುವುದರಿಂದ ರೈತರಿಗೆ ಬೆಳೆ ಸಾಲವನ್ನು ನೀಡುವಂತೆ ಉಡುಪಿ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ ತಿಳಿಸಿದ್ದಾರೆ.
ಕೃಷಿ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ರೈತ ಕುಟುಂಬಗಳಿಗೆ ಆದಾಯ ನೆರವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂ-ಕಿಸಾನ್ ಯೋಜನೆಯನ್ನು ಆರಂಭಿಸಿದೆ ಎಂದು ಜಗದೀಶ ಅವರು ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿತ್ತನೆಗೆ ಹಣಕಾಸು ನೆರವು ಒದಗಿಸಿ ಕೊಡುವುದು, ಬೆಳೆ ಆರೋಗ್ಯ ಖಾತರಿಪಡಿಸಿಕೊಳ್ಳುವುದು ಯೋಜನೆ ಒಳಗೊಂಡಿದೆ. ಈ ಯೋಜನೆಯಡಿ ದೇಶಾದ್ಯಂತ ರೈತ ಕುಟುಂಬಗಳಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ 6,000 ರೂ.ನೀಡಲಾಗುವುದು.
ಪಿಎಂ-ಕಿಸಾನ್ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ದತ್ತಾಂಶಗಳ ವಿಶ್ಲೇಷಣೆಯಂತೆ, ಪಿಎಂ-ಕಿಸಾನ್‌ನಲ್ಲಿ ಸುಮಾರು 9.22 ಕೋಟಿ ರೈತ ಕುಟುಂಬಗಳು ನೋಂದಣಿಯಾಗಿರುವುದನ್ನು ಕೇಂದ್ರ ಸರ್ಕಾರ ಗಮನಿಸಿದೆ.
2.47 ಕೋಟಿ ಪಿಎಂ-ಕಿಸಾನ್ ಫಲಾನುಭವಿಗಳು ಕೆಸಿಸಿಗಳನ್ನು ಹೊಂದಿಲ್ಲವಾದರೂ ಅವರು ಬೆಳೆ ಸಾಲಕ್ಕೆ ಅರ್ಹರೆಂದು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. ಈ ರೈತರನ್ನು ತ್ವರಿತವಾಗಿ ಕೆಸಿಸಿ ಅಡಿಯಲ್ಲಿ ತರಲು, ಇಂದಿನಿಂದ ರಿಂದ 24 ರವರೆಗೆ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಒಂದು ಕೋಟಿ ಹೊಸ ಕೆಸಿಸಿಗಳನ್ನು ಬ್ಯಾಂಕುಗಳು ವಿತರಿಸಲಿವೆ.
ಉಡುಪಿ ಜಿಲ್ಲೆಯಲ್ಲಿ, ಪಿಎಂ-ಕಿಸಾನ್ ಅಡಿಯಲ್ಲಿ ದಾಖಲಾದ ರೈತರ ಸಂಖ್ಯೆ 1,34,217 ಆಗಿದ್ದು, ಬ್ಯಾಂಕುಗಳು (ರಾಷ್ಟ್ರೀಕೃತ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು) ಒದಗಿಸುವ ಬೆಳೆ ಸಾಲಗಳ ಸಂಖ್ಯೆ (ಕೆಸಿಸಿ) ಕೇವಲ 30,940ರಷ್ಟಿದೆ. ಅಂದರೆ, 1,03,277 ರೈತರು ಬೆಳೆ ಸಾಲವನ್ನು ಪಡೆದಿಲ್ಲ ಎಂದು ತೋರಿಸುತ್ತದೆ.
ಇಲ್ಲಿಯವರೆಗೆ ಸಾಲ ಪಡೆಯದ ರೈತರು ಇದರ ಸೌಲಭ್ಯ ಪಡೆಯಲು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು. ವಿಸ್ತೃತ ಮಾರ್ಗಸೂಚಿಗಳಂತೆ ಅರ್ಹ ರೈತರಿಗೆ ಬೆಳೆ ಸಾಲ ನೀಡುವಂತೆ ಉಡುಪಿ ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಸೂಚಿಸಲಾಗಿದೆ ಎಂದು ಜಗದೀಶ ಹೇಳಿದ್ದಾರೆ.