ನವದೆಹಲಿ, ಸೆ 14 ಸತಾರ ಪ್ರದೇಶದ ಎನ್ಸಿಪಿಯ ಪ್ರಮುಖ ನಾಯಕ ಹಾಗೂ ಶಿವಾಜಿ ಮಹಾರಾಜರ ನೇರ ವಂಶಸ್ಥ ಉದಯನ್ರಾಜ್ ಭೋಸಲೆ ಶನಿವಾರ ಇಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಇದರೊಂದಿಗೆ ವಿಧಾನಸಭಾ ಚುನಾವಣೆಯ ಹೊಸ್ತಿನಲ್ಲಿರುವ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವ ಮತ್ತು ಉತ್ತಮ ಕೆಲಸಗಳಿಂದ ಪ್ರೇರಣೆ ಪಡೆದು ನಾನು ಬಿಜೆಪಿ ಸೇರ್ಪಡೆಗೊಳ್ಳಲು ನಿರ್ಧರಿಸಿದೆ ಎಂದು ಭೋಸಲೆ ಸುದ್ದಿಗಾರರಿಗೆ ತಿಳಿಸಿದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೆ ವಿಧಿಯನ್ನು ರದ್ದುಪಡಿಸಿದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಕ್ರಮವನ್ನು ಕೂಡ ಅವರ ಇದೇ ವೇಳೆ ಶ್ಲಾಘಿಸಿದರು. ಇದಕ್ಕೂ ಮೊದಲು ಭೋಸಲೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸತಾರಾ ಲೋಕಸಭಾ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪಕ್ಷವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಲಿದೆ, ಇದು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಾಧಿಸಿದ ಜಯಕ್ಕಿಂತ ದೊಡ್ಡದಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಗೆಲುವನ್ನು ದಾಖಲಿಸುವ ನಮ್ಮ ಪ್ರಯತ್ನದಲ್ಲಿ, ಭೋಸಲೆ ಅವರ ಪಕ್ಷದ ಸೇರ್ಪಡೆಯು ನಮಗೆ ಹೆಚ್ಚಿನ ಸಹಾಯ ಮಾಡಲಿದೆ ಎಂದು ಅವರು ಹೇಳಿದ ಭೋಸಲೆ ಯುವಕರ ಮಧ್ಯೆ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದು, ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವುದರಿಂದ ಕೇಸರಿ ಪಕ್ಷಕ್ಕೆ ಮತ್ತು ಒಟ್ಟಾರೆಯಾಗಿ ರಾಜ್ಯಕ್ಕೆ ಸಹಾಯವಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಕೂಡ ಉಪಸ್ಥಿತರಿದ್ದರು. ಈ ಹಿಂದೆ 1995 ಮತ್ತು 1999ರ ಅವಧಿಯಲ್ಲಿ ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಭೋಸಲೆ 2009 ರಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿಗೆ ಸೇರಿದ್ದರು. ಆದ್ದರಿಂದ ಅವರು ಮರಳಿ ಮನೆಗೆ ಬಂದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಇದನ್ನು ಬಣ್ಣಿಸಿದ್ದಾರೆ. ಲೋಕಸಭೆಯಲ್ಲಿ ಎನ್ಸಿಪಿಯ ಬಲವು ಈಗ ನಾಲ್ಕರಿಂದ ಮೂರಕ್ಕೆ ಕಡಿಮೆಯಾಗಿದ್ದು, ಇದು ಪಕ್ಷಕ್ಕೆ ಪ್ರಮುಖ ಹಿನ್ನಡೆಯಾಗಿದೆ. ರಾಜ್ಯ ಚುನಾವಣೆಗೆ ಕೆಲವೇ ವಾರಗಳ ಮೊದಲು ಪವಾರ್ ಅವರ ಎನ್ಸಿಪಿ ತೊರೆದ ಭೋಸಲೆ ಅವರ ನಿರ್ಧಾರವು ಮರಾಠಾ ಸಮುದಾಯದಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.