ತಿರುಪತಿ 09: ತಿರುಪತಿಯ ಪ್ರಸಿದ್ಧ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಬುಧವಾರ ರಾತ್ರಿ ‘ವೈಕುಂಠ ದ್ವಾರ ದರ್ಶನ’ದ ಟೋಕನ್ ಪಡೆದುಕೊಳ್ಳುವಾಗ ಉಂಟಾದ ಕಾಲ್ತುಳಿತದಲ್ಲಿ ಆರು ಮಂದಿ ಭಕ್ತರು ಮೃತಪಟ್ಟಿದ್ದಾರೆ.
ಮೃತರಲ್ಲಿ ಮೂವರು ಮಹಿಳೆಯರು. ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೂರಾರು ಭಕ್ತರು ಸೇರಿದ್ದು, ಟೋಕನ್ ಪಡೆಯಲು ಒಟ್ಟಿಗೆ ಮುಗಿಬಿದ್ದುದು ಅವಘಡಕ್ಕೆ ಕಾರಣವಾಗಿದೆ.
ವೈಕುಂಠ ದ್ವಾರ ದರ್ಶನವು ಜನವರಿ 10ರಿಂದ 10 ದಿನಗಳವರೆಗೆ ಇರಲಿದೆ. ಇದಕ್ಕಾಗಿ ದೇಶದ ವಿವಿಧೆಡೆಗಳಿಂದ ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು.
ಮೃತರ ಪೈಕಿ ಒಬ್ಬರ ಗುರುತು ಸಿಕ್ಕಿದೆ. ಗೇಟು ತೆರೆಯುತ್ತಿದ್ದಂತೆ ಎಲ್ಲರೂ ನುಗ್ಗಿದರು. ಹೀಗಾಗಿ ಕಾಲ್ತುಳಿತ ಉಂಟಾಯಿತು ಎಂದು ತಿರುಮಲ ತಿರುಪತಿ ದೇವಸ್ಥಾನ ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದ್ದಾರೆ.
ಪ್ರತಿ ವರ್ಷ ಇಲ್ಲಿನ ದೇವಸ್ಥಾನದಲ್ಲಿ ‘ವೈಕುಂಠ ದ್ವಾರ ದರ್ಶನ’ಕ್ಕಾಗಿ ದೇಶದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
‘ದೇವಸ್ಥಾನ ಆವರಣದ ವಿಷ್ಣು ನಿವಾಸ ಬಳಿ ಆದ ನೂಕುನುಗ್ಗಲಿನಲ್ಲಿ ಆರು ಮಂದಿ ಭಕ್ತರು ಮೃತಪಟ್ಟಿದ್ದು, ನನಗೆ ತೀವ್ರ ನೋವಾಗಿದೆ’ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮೃತರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಆಂಧ್ರ ಪ್ರದೇಶದ ತಿರುಪತಿಯಲ್ಲಿ ಜನವರಿ 8ರಂದು ಬುಧವಾರ ನಡೆದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಸಾವಿಗೀಡಾದವರಿಗೆ ರಾಜ್ಯ ಸರ್ಕಾರದ ಮುಜುರಾಯಿ ಇಲಾಖೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.