ನ್ಯೂಯಾರ್ಕ,ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಸ್ಪೇನ್ ನ ರಫೇಲ್ ನಡಾಲ್ ಹಾಗೂ ವಿಶ್ವದ ನಂಬರ್ ಒನ್ ಆಟಗಾರ್ತಿ ಜಪಾನ್ ನ ನೋಜೋಮಿ ಒಸಕಾ ಯುಎಸ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯ ದಾಖಲಿಸಿದ್ದಾರೆ.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್ ನ ನಡಾಲ್ 6-3, 6-2, 6-2 ರಿಂದ ಜಾನ್ ಮಿಲ್ಮನ್ ಅವರನ್ನು ಮೂರು ನೇರ ಸೆಟ್ ಗಳಲ್ಲಿ ಮಣಿಸಿ, ಎರಡನೇ ಸುತ್ತು ಪ್ರವೇಶಿಸಿದರು. 2 ಗಂಟೆ 8 ನಿಮಿಷದ ಪಂದ್ಯದಲ್ಲಿ ನಡಾಲ್ ತಮ್ಮ ಭರ್ಜರಿ ಆಟದ ಮೂಲಕ ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು.
ಮರೀನ್ ಸಿಲಿಕ್ 6-3, 6-2, 7-6 ರಿಂದ ಸ್ಲೋವಕಿಯಾದ ಮಾರ್ಟ್ನ್ ಕ್ಲಿಜಾನ್ ವಿರುದ್ಧ, ನಾಲ್ಕನೇ ಶ್ರೇಯಾಂಕಿತ ಆಸ್ಟ್ರಿಯಾದ ಡೋಮಿಕ್ ಥಿಮ್ 6-4, 3-6, 3-6, 2-6 ರಿಂದ ಇಟಲಿಯ ಥಾಮಸ್ ಫಾಬಿಯಾನೋ ವಿರುದ್ಧ ನಿರಾಸೆ ಅನುಭವಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ನಲ್ಲಿ ಒಸಕಾ 6-4, 6-7, 6-2 ರಿಂದ ರಷ್ಯಾದ ಆನಾ ಬ್ಲಿಂಕೊವಾ ವಿರುದ್ಧ 2 ಗಂಟೆ 28 ನಿಮಿಷ ನಡೆದ ಸೆಣಸಾಟದಲ್ಲಿ ಜಯ ಸಾಧಿಸಿದರು.
ಉಳಿದಂತೆ ರೋಮೆನಿಯಾದ ಸಿಮೋನಾ ಹಲೆಪ್ 6-3, 3-6, 6-2 ರಿಂದ ಅಮೆರಿಕದ ನಿಕೋಲ್ ಗಿಬ್ಸ್ ವಿರುದ್ಧ, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ 6-2, 6-4 ರಿಂದ ಜೆಕ್ ಗಣರಾಜ್ಯದ ಡೆನಿಸ್ ಅಲರ್ಟೂವಾ ವಿರುದ್ಧ, ಜೆಕ್ ಗಣರಾಜ್ಯದ ಕ್ರಿಸ್ಟಿಯಾನ್ ಪ್ಲಿಸ್ಕೋವಾ 6-4, 6-3 ರಿಂದ ಫ್ರಾನ್ಸ್ ನ ಡೈನ್ ಪರ್ರ್ ವಿರುದ್ಧ ಗೆಲುವಿನ ನಗೆ ಬೀರಿದರು.
ಅಜರೆಂಕಾ, ಗರ್ಬ್ನ್ ಗೆ ಸೋಲು
ವಿಕ್ಟೋರಿಯಾ ಅಜರೆಂಕಾ 6-3, 3-6, 4-6 ರಿಂದ ಆರ್ಯನ್ ಸಬಲೆಂಕ ವಿರುದ್ಧ ಹಾಗೂ ಎರಡು ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಗಾರ್ಬ್ನ್ ಮುಗುರುಜಾ 6-2, 1-6, 3-6 ರಿಂದ ಅಮೆರಿಕದ ಅಲಿಸಾನ ರಿಸ್ಕೆ ವಿರುದ್ಧ ನಿರಾಸೆ ಅನುಭವಿಸಿದ್ದು, ಟೂರ್ನಿಯ ಮೊದಲ ಸುತ್ತಿನಿಂದಲೇ ತಮ್ಮ ಅಭಿಯಾನ ಪೂರ್ಣಗೊಳಿಸಿದ್ದಾರೆ.