ನ್ಯೂಯಾರ್ಕ್, ಸೆ 6: ಯುವ ಆಟಗಾರ್ತಿ ಬಿಯಾಂಕ ಆ್ಯಂಡ್ರೀಸ್ಕು ಅವರು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ಗೆ ಪ್ರವೇಶ ಮಾಡಿದ್ದಾರೆ. ಆ ಮೂಲಕ ಕೆನಡಾ ಬಾಲಕಿಯ ಯುಎಸ್ ಓಪನ್ ಕನಸು ಈಡೇರಿಸಿಕೊಳ್ಳಲು ವಿಶ್ವ ಶ್ರೇಷ್ಠ ಆಟಗಾರ್ತಿ ಸೆರೇನಾ ವಿಲಿಯಮ್ಸ್ ವಿರುದ್ಧ ನಾಳೆ ಕಠಿಣ ಸವಾಲು ಎದುರಿಸಲಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಪೈನಲ್ ಹಣಾಹಣಿಯಲ್ಲಿ ಬೆಲಿಂಡಾ ಬೆನ್ಸಿಚ್ ಅವರ ವಿರುದ್ಧ ಬಿಯಾಂಕ 7-6(3), 7-5 ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಬಿಯಾಂಕ ಆ್ಯಂಡ್ರೀಸ್ಕು ಅವರು ಈಗಾಗಲೇ ಇಂಡಿಯನ್ ವೇಲ್ಸ್ ಹಾಗೂ ಟೊರಂಟೊ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಯುಎಸ್ ಓಪನ್ ಸೆಮಿಫೈನಲ್ ಹಣಾಹಣಿಯಲ್ಲಿ ಬಿಯಾಂಕ ಸ್ವಿಸ್ ಆಟಗಾರ್ತಿಯನ್ನು ಅರ್ಥರ್ ಅಂಗಳದಲ್ಲಿ ಸೋಲುಣಿಸಿದ್ದಾರೆ. 2018ರ ಯುಎಸ್ ಓಪನ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು. ಆ ಮೂಲಕ ಅವರು ವಿಶ್ವ ಶ್ರೇಯಾಂಕದಲ್ಲಿ 178 ಶ್ರೇಯಾಂಕ ಪಡೆದಿದ್ದರು. ಆದರೆ, ಈ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದು, ಸೆರೇನಾ ವಿಲಿಯಮ್ಸ್ ವಿರುದ್ಧ ಶನಿವಾರ ಯುಎಸ್ ಕಿರೀಟಕ್ಕಾಗಿ ಹೋರಾಟ ನಡೆಸಲಿದ್ದಾರೆ. ಮಹಿಳೆಯರ ಸಿಂಗಲ್ಸ್ ಮತ್ತೊಂದು ಸೆಮಿಫೈನಲ್ಸ್ ಹಣಾಹಣಿಯಲ್ಲಿ ಸೆರೇನಾ ವಿಲಿಯಮ್ಸ್ ಅವರು ಎಲೀನಾ ಸ್ವಿಟೋಲಿನಾ ವಿರುದ್ಧ 6-3, 6-1 ಅಂತರದಲ್ಲಿ ನೇರ ಸೆಟ್ಗಳಲ್ಲಿ ಗೆದ್ದು 24ನೇ ಗ್ರ್ಯಾನ್ ಸ್ಲ್ಯಾಮ್ ಪಯಣ ಮುಂದುವರಿಸಿದ್ದಾರೆ. ಈ ಹಿಂದೆ ಬಿಯಾಂಕ ಹಾಗೂ ಸೆರೇನಾ ಇವರಿಬ್ಬರು ರೋಜರ್ಸ್ ಕಪ್ ಫೈನಲ್ನಲ್ಲಿ ಮುಖಾಮುಖಿಯಾಗಿದ್ದರು. ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆ್ಯಂಡ್ರೀಸ್ಕು ಅವರು ಸೆರೇನಾ ವಿಲಿಯಮ್ಸ್ ವಿರುದ್ಧ 3-1 ಮುನ್ನಡೆ ಸಾಧಿಸಿದ್ದರು. ಈ ವೇಳೆ ಅಮೆರಿಕ ಆಟಗಾರ್ತಿ ಗಾಯಕ್ಕೆ ಒಳಗಾಗಿ ಪಂದ್ಯ ಬಿಟ್ಟುಕೊಟ್ಟರು.