ಲಕ್ನೋ, ನವೆಂಬರ್ 5: ಯುಪಿಪಿಸಿಎಲ್-ಡಿಎಚ್ಎಫ್ಎಲ್ ಹೂಡಿಕೆ ಹಗರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಯುಪಿಪಿಸಿಎಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಪಿ. ಮಿಶ್ರಾ ಅವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದಂತಾಗಿದೆ. ಮಂಗಳವಾರ ಮುಂಜಾನೆ ರಾಜ್ಯ ರಾಜಧಾನಿಯ ಗೋಮತಿ ನಗರ ನಿವಾಸದಲ್ಲಿ ಹಜರತ್ಗಂಜ್ ಪೊಲೀಸರು ಮಿಶ್ರಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಿದ್ದಾರೆ ಎಂದು ಇಲ್ಲಿನ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಹಿಂದೆ ಮಾಜಿ ಉದ್ಯೋಗಿಗಳಾದ ಟ್ರಸ್ಟ್ ನಿದರ್ೆಶಕ (ಹಣಕಾಸು) ಸುಧಾಂಶು ದ್ವಿವೇದಿ ಮತ್ತು ಜನರಲ್ ಮ್ಯಾನೇಜರ್ ಪಿ. ಕೆ. ಗುಪ್ತಾ ಅವರನ್ನು ಪೊಲೀಸರು ಬಂಧಿಸಿದ್ದರು. ಹಿಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಡಳಿತದಲ್ಲಿ ಮಿಶ್ರಾ ಮುಖ್ಯಮಂತ್ರಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರು ನಿವೃತ್ತಿ ಹೊಂದಿದ್ದರೂ ಅವರನ್ನು ಮೂರು ಬಾರಿ ಅವರ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಯಾದವ್ ಬಗ್ಗೆ ಮಿಶ್ರಾ ಅವರು ಪುಸ್ತಕವನ್ನೂ ಬರೆದಿದ್ದಾರೆ. ಮಾರ್ಚ್ 19, 2017 ರಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹೂಡಿಕೆ ಮಾಡಿದಾಗ ಮಿಶ್ರಾ ಟ್ರಸ್ಟ್ ಮುಖ್ಯಸ್ಥರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು (ಇಒಡಬ್ಲ್ಯೂ) ಮಿಶ್ರಾ ಅವರನ್ನು ಬಂಧಿಸುವ ಮೊದಲು ವಿಚಾರಣೆಗೆ ಒಳಪಡಿಸಿದ್ದರು. ಹಗರಣದ ಬಗ್ಗೆ ಸಿಬಿಐ ತನಿಖೆಗೆ ಯುಪಿ ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ, ಆದರೆ ಇದನ್ನು ಕೇಂದ್ರ ಸಂಸ್ಥೆ ವಹಿಸಿಕೊಳ್ಳುವವರೆಗೆ ಯುಪಿ ಪೊಲೀಸರ ಇಒಡಬ್ಲ್ಯೂ ಈ ಬಗ್ಗೆ ತನಿಖೆ ನಡೆಸುತ್ತಿದೆ. ಯುಪಿಪಿಸಿಎಲ್ ಟ್ರಸ್ಟ್ನ 46,000 ಉದ್ಯೋಗಿಗಳ ಜಿಪಿಎಫ್ ಮತ್ತು ಸಿಪಿಎಫ್ ಹಣವನ್ನು ಡಿಎಚ್ಎಫ್ಎಲ್ನಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಾಗ 2631 ಕೋಟಿ ರೂಪಾಯಿಯ ಹಗರಣದ ಬಗ್ಗೆ ತಿಳಿದುಬಂತು. ನಂತರ, ಡಿಎಚ್ಎಫ್ಎಲ್ಗೆ ಭೂಗತ ಜಗತ್ತಿನೊಂದಿಗೆ ಸಂಪರ್ಕವಿದೆ ಎಂದು ಬೆಳಕಿಗೆ ಬಂದಿತು. ಇಡಿ ಹಣಕಾಸು ಸಂಸ್ಥೆಯ ಖಾತೆಗಳನ್ನು ವಶಪಡಿಸಿಕೊಂಡಿದೆ.