ಬೆಂಗಳೂರು, ಫೆ 10 : ರಾಷ್ಟ್ರೀಯ ಸುದ್ದಿ ವಾಹಿನಿ, ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್ಐ)ದ ಬೆಂಗಳೂರಿನ ಕಟ್ಟಡದ ಗುತ್ತಿಗೆ ನವೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ(ಬಿಬಿಎಂಪಿ) ಹೈಕೋರ್ಟ್ ಆದೇಶಿಸಿದೆ.
ಇದರಿಂದ ಬಿಬಿಎಂಪಿಗೆ ಭಾರಿ ಹಿನ್ನೆಡೆಯಾದಂತಾಗಿದೆ. ಬಿಬಿಎಂಪಿ ಕ್ರಮ ಪ್ರಶ್ನಿಸಿ ಯುಎನ್ ಐ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿ ಇತ್ಯರ್ಥವಾಗುವರೆಗೆ ಕಟ್ಟಡವನ್ನು ಯಾರಿಗೂ ಗುತ್ತಿಗೆ ನೀಡದಂತೆ ಹಾಗೂ ಯಾವುದೇ ನವೀಕರಣ ಕಾಮಗಾರಿ ನಡೆಸದಂತೆ ಬುಧವಾರ ನಿರ್ದೇಶನ ನೀಡಿದೆ.
ಯುಎನ್ಐ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಉದಯ್ ಹೊಳ್ಳ, ಅರ್ಜಿದಾರರು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಟ್ಟಡದ ಗುತ್ತಿಗೆ ನವೀಕರಿಸುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರೂ, ಅದನ್ನು ಪರಿಗಣಿಸದೆ ಕಟ್ಟಡವನ್ನು ವಶಪಡಿಸಿಕೊಂಡಿದೆ ಎಂಬ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಕಟ್ಟಡದ ಗುತ್ತಿಗೆಯನ್ನು ನವಿಕರಿಸಲು ಈ ಹಿಂದೆ ಬಿಬಿಎಂಪಿ ಒಪ್ಪಿಗೆ ನೀಡಿತ್ತು ಎಂಬ ವಿಷಯವನ್ನು ಕೂಡ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಯುಎನ್ಐ ಸುದ್ದಿಸಂಸ್ಥೆ ವಿರುದ್ಧ ಬಿಬಿಎಂಪಿ ಜಾರಿಗೊಳಿಸಿದ್ದ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಬಿಬಿಎಂಪಿಯ ಉಪ ಆಯುಕ್ತರು ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳುವ ಅದೇಶ ಹೊರಡಿಸಿದ್ದರು. ಇದರ ಹಿಂದೆ ಬಿಬಿಎಂಪಿ ಅಧಿಕಾರಿಗಳ ದುರುದ್ದೇಶವಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ವಿವಾದಿತ ಕಟ್ಟಡವನ್ನು ಅರ್ಜಿದಾರರು ನಿರ್ಮಿಸಿದ್ದು, ಅದರ ಮೇಲೆ ಬಿಬಿಎಂಪಿಗೆ ಯಾವುದೇ ಅಧಿಕಾರವಿಲ್ಲ. ಆದ್ದರಿಂದ ಕಟ್ಟಡದಲ್ಲಿನ ಯುಎನ್ ಐ ಸುದ್ದಿ ಸಂಸ್ಥೆಗೆ ಸಂಬಂಧಿಸಿದ ವಸ್ತುಗಳನ್ನು ಸ್ಥಳಾಂತರಿಸದಂತೆ ಹಾಗೂ ಕಟ್ಟಡ ನವೀಕರಿಸಿ, ಇತರರಿಗೆ ಉಪಗುತ್ತಿಗೆ ನೀಡದಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಯುಎನ್ಐ ಸುದ್ದಿಸಂಸ್ಥೆ ಹಲವು ದಶಕಗಳಿಂದ ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಪತ್ರಿಕೆಗಳ ಜೊತೆಗೆ, ಮಧ್ಯಮ ಹಾಗೂ ಸಣ್ಣ ಪತ್ರಿಕೆಗಳಿಗೆ ಸುದ್ದಿ ಸೇವೆ ಒದಗಿಸುತ್ತಿದೆ. ಇತ್ತೀಚೆಗಷ್ಟೇ ಸಂಸ್ಥೆ ಕನ್ನಡ ಸುದ್ದಿಸೇವೆಯನ್ನು ಕೂಡ ಆರಂಭಿಸಿದ್ದು, ಇದು ದೇಶದಲ್ಲೇ ಪ್ರಥಮ ಪ್ರಯತ್ನವಾಗಿದೆ.