ಹೆಚ್ಚು ವಿಮಾನಗಳ ಸೌಲಭ್ಯಕ್ಕೆ ಯುಎಇ ಕನ್ನಡಿಗರ ಮನವಿ

ಬೆಂಗಳೂರು, ಮೇ೧೩,ಕರ್ನಾಟಕಕ್ಕೆ ವಾಪಸ್ಸಾಗಲು ಹೆಚ್ಚಿನ ವಿಮಾನಗಳ ಸೌಲಭ್ಯ ಒದಗಿಸುವಂತೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ನಲ್ಲಿನ ಕನ್ನಡಿಗರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಡಿಯೋ ಕಾನ್ಫರೆನ್ಸ್ ವೇಳೆ ಮನವಿ ಮಾಡಿದ್ದಾರೆ.ಯುಎಇ ನಲ್ಲಿನ ಹೆಚ್ಚಿನ ಕನ್ನಡಿಗರು ಕರಾವಳಿ ಭಾಗದವರಾಗಿರುವುದರಿಂದ ಹೆಚ್ಚಿನ ವಿಮಾನಗಳ ಸೌಲಭ್ಯವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವ್ಯವಸ್ಥೆ ಮಾಡಬೇಕೆಂದು ಬಹುತೇಕ ಯುಎಇ ಕನ್ನಡಿಗರು ಮನವಿ ಮಾಡಿರುವುದಾಗಿ ಮುಖ್ಯಮಂತ್ರಿಗಳ ಕಚೇರಿಯ ಮೂಲಗಳು ತಿಳಿಸಿವೆ.ಲಾಕ್‌ಡೌನ್‌ನಿಂದ ಯುಎಇ ನಲ್ಲಿರುವ ರಾಜ್ಯದ ಅನೇಕರು ನಿರುದ್ಯೋಗಿಗಳಾಗಿದ್ದು, ರಾಜ್ಯಕ್ಕೆ ಹಿಂತಿರುಗಲು  ಹಣ ಇಲ್ಲದಂತಾಗಿದೆ. ಸರ್ಕಾರ ಯುಎಇ ನಲ್ಲಿರುವ ಕನ್ನಡಿಗರ ರಕ್ಷಣೆಗೆ ಬರಬೇಕು ಎಂದು ಯುಎಇನಲ್ಲಿನ ಕನ್ನಡಿಗರ ಸಂಘಗಳು ಮುಖ್ಯಮಂತ್ರಿಯವರನ್ನು ಒತ್ತಾಯಿಸಿವೆ. ಸರ್ಕಾರ ಇವರೆಲ್ಲರನ್ನೂ ವಾಪಸ್‌ ಕರೆತರಲು ಏರ್ಪಾಡುಗಳನ್ನು ಮಾಡಿರುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.