ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು: ರಕ್ಷಣಾ ಕಾರ್ಯ ಚುರುಕು

 ತಿರುಚನಾಪಳ್ಳಿ, ಅ.26:    ತೆರೆದ ಕೊಳವೆ ಬಾವಿಯನ್ನು ಮುಚ್ಚುವಂತೆ ನ್ಯಾಯಾಲಯಗಳು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಇಂತಹ ಕೊಳವೆ ಬಾವಿಗಳಿಗೆ ಮಕ್ಕಳು ಬೀಳುತ್ತಿರುವ ಘಟನೆಗಳು ಮಾತ್ರ ಇನ್ನೂ ನಿಂತಿಲ್ಲ. ಇದೀಗ ತಮಿಳುನಾಡಿನ ತಿರುಚನಾಪಳ್ಳಿಯ ಗ್ರಾಮವೊಂದರಲ್ಲಿ ಎರಡು ವರ್ಷದ ಮಗುವೊಂದು ತೆರೆದ ಕೊಳವೆ ಬಾವಿಗೆ ಬಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಸುಮಾರು 1000 ಅಡಿಗಳಷ್ಟು ಆಳದ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷ ಪ್ರಾಯದ ಮಗುವನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದ್ದು, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಸಂಜೆಯಿಂದಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮನಪ್ಪರಯಿ ಜಿಲ್ಲೆಯ ನಡುಕಟ್ಟುಪಟ್ಟಿಯಲ್ಲಿ ನಿನ್ನೆ ಸಂಜೆ 5.30ರ ಸುಮಾರಿಗೆ ಎರಡು ವರ್ಷದ ಸುಜಿತ್ ವಿಲ್ಸನ್ ಎಂಬ ಬಾಲಕ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಅವರ ಮನೆಯ ಎದುರಿಗಿರುವ ಈ ಕೊಳವೆ ಬಾವಿ ತೆರೆದು ಸುಮಾರು ಏಳು ವರ್ಷವಾಗಿರಬಹುದು ಎಂದು ಹೇಳಲಾಗುತ್ತಿದೆ. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆರಂಭದಲ್ಲಿ 30 ಅಡಿ ಆಳದಲ್ಲಿ ಸಿಲುಕಿದ್ದ ಮಗು ಈಗ 68 ಅಡಿಗೆ ಜಾರಿದೆ ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ವಿವಿಧ ಸಾಧನಗಳು ಮತ್ತು ವಿಧಾನಗಳನ್ನು ಬಳಸಿಕೊಂಡು ಮಧುರೈ, ಕೊಯಮತ್ತೂರು ಮತ್ತು ರಾಮನಾಥಪುರಂನ ಅನೇಕ ತಂಡಗಳು ಮಾಡಿದ ಪ್ರಯತ್ನಗಳು ವಿಫಲವಾದ ನಂತರ ಕೊಳವೆ ಬಾವಿಯ ಸಮಾನಾಂತರವಾಗಿ ಗುಂಡಿ ಕೊರೆಯುವಿಕೆಯನ್ನು ಪುನರಾರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಶುಕ್ರವಾರ ಸಂಜೆ, ಅಗ್ನಿಶಾಮಕ ಮತ್ತು ರಕ್ಷಣಾ ತಂಡ ಮತ್ತು ಇತರ ಕಾರ್ಮಿಕರು ಬೋರ್ವೆಲ್ಗೆ ಹತ್ತಿರ ಮತ್ತೊಂದು ಕಂದಕವನ್ನು ಅಗೆಯಲು ಜೆಸಿಬಿಗಳನ್ನು ಬಳಸಿದರು. ರಕ್ಷಣಾ ಕಾರ್ಯಕರ್ತರು ಸುರಂಗವನ್ನು ಅಗೆಯುವ ಮೂಲಕ ಹುಡುಗನನ್ನು ತಲುಪಬೇಕೆಂದು ಉದ್ದೇಶಿಸಿದ್ದರು. ಆದರೆ ಅಲ್ಲಿ ಬಂಡೆಯೊಂದು ಸಿಕ್ಕಿದ ಪರಿಣಾಮ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ನಂತರ, ಈ ಮೊದಲು ಇಂತಹ ಕೆಲವು ರಕ್ಷಣಾ ಕಾರ್ಯಗಳಲ್ಲಿ ಯಶಸ್ವಿಯಾಗಿ ಬಳಸಿದ ಸಾಧನವನ್ನು ವಿನ್ಯಾಸಗೊಳಿಸಿದ ಎಂ.ಮಣಿಕಂಠನ್ ಅವರು ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿಕೊಂಡರು. ಆದರೆ ಅವರ ಸಾಧನದಲ್ಲಿದ್ದ ಹಗ್ಗವನ್ನು ಹುಡುಗನ ಕೈಗೆ ಕಟ್ಟಲು ಸಾಧ್ಯವಾಗದ ಕಾರಣ ಅವರ ಪ್ರಯತ್ನಗಳು ಕೂಡ ವಿಫಲವಾದವು. ಒಂದು ಕೈಯಲ್ಲಿ ಹಗ್ಗವನ್ನು ಕಟ್ಟಬಹುದಾದರೂ, ಅವನ ಇನ್ನೊಂದು ಕೈಯನ್ನು ಹಿಡಿಯುವ ಪ್ರಯತ್ನಗಳು ವಿಫಲವಾದವು ಎಂದು ಮೂಲಗಳು ತಿಳಿಸಿವೆ. ಕೊಯಮತ್ತೂರು ಮತ್ತು ರಾಮನಾಥಪುರ ತಂಡಗಳು ಕೂಡ ವಿಫಲ ಪ್ರಯತ್ನಗಳನ್ನು ಮಾಡಿತು. ಕೊಳವೆ ಬಾವಿಯ ಮೇಲಿನಿಂದಲೇ ಬಾಲಕನ ಚಿಕ್ಕಪ್ಪ ಅಳುತ್ತಿದ್ದ ಹುಡುಗನೊಂದಿಗೆ ಮಾತನಾಡುತ್ತಲೇ ಇದ್ದರು, ಬಾಲಕ ತಡರಾತ್ರಿಯವರೆಗೆ ಪ್ರತಿಕ್ರಿಯಿಸಿದ್ದ. ಆದರೆ ಬೆಳಿಗ್ಗೆ ಹುಡುಗನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ತನ್ನ ಮಗನ ಧ್ವನಿಯನ್ನು ಕೇಳಿದ್ದ ತಾಯಿ ಡಬ್ಲ್ಯು. ಕಲೈವಾನಿ ಅವರು ಈಗ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತಂಡ, ಆಮ್ಲಜನಕವನ್ನು ಕೊಳವೆಯ ಮೂಲಕ ರಂಧ್ರಕ್ಕೆ ಹರಿಯಬಿಟ್ಟಿದ್ದರು. ಹೆಚ್ಚುತ್ತಿರುವ ಆತಂಕದ ಮಧ್ಯೆ ಕಾರ್ಯಾಚರಣೆಯನ್ನು ವೀಕ್ಷಿಸಲು ಇಡೀ ಗ್ರಾಮದ 1,000 ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ನೆರೆದಿದ್ದಾರೆ. ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿರುವ ಆರೋಗ್ಯ ಸಚಿವ ಸಿ. ವಿಜಯಬಾಸ್ಕರ್ ಅವರು, ಮಗು ಪ್ರಸ್ತುತ 70 ಅಡಿ ಆಳದಲ್ಲಿ ಸುಲಿಕಿದೆ. ಎಸ್ಡಿಆರ್ಎಫ್ಗೆ ರಕ್ಷಣಾ ಕಾರ್ಯಾಚರಣೆಯನ್ನು ಹಸ್ತಾಂತರಿಸಿದ್ದೇವೆ ಎಂದು ಅವರು ಹೇಳಿದರು. ವೃತ್ತಿಪರರು ಅಂತರ್ಜಾಲದ ಮೂಲಕ ಕರೆ ಮಾಡಿ ಸಲಹೆಗಳನ್ನು ನೀಡುತ್ತಿದ್ದಾರೆ. "ನಾವು ಎಲ್ಲಾ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಜೋಳದ ಹೊಲದಲ್ಲಿರುವ ಈ ಕೊಳವೆ ಬಾವಿ 1000 ಅಡಿ ಆಳವಿದೆ. ಈ ಬಾವಿಯನ್ನು ಮುಚ್ಚಲಾಗಿತ್ತು. ಆದರೆ ಇತ್ತೀಚಿನ ಸುರಿದ ಭಾರಿ ಮಳೆಯ ನಂತರ ಇದು ತೆರೆದುಕೊಂಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಸಂಭವಿಸಿದಾಗ ತನ್ನ ಮಗ ಸೇರಿದಂತೆ ನಾಲ್ವರು ಹುಡುಗರು ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸುಜಿತ್ ಮನೆಗೆ ಹಿಂದಿರುಗಲು ನಿರ್ಧರಿಸಿದ. ಆದರೆ ಜೋಳದ ಹೊಲದ ನಡುವೆ ಮನೆಗೆ ಬರಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಬಾಲಕನ ಚಿಕ್ಕಮ್ಮ ಎ. ಜೋಸೆಫಿನ್ ತಿಳಿಸಿದ್ದಾರೆ.