ಕೆ‌ಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಇಬ್ಬರಿಗೆ ಕೋವಿಡ್ ಸೋಂಕು ದೃಢ: ತಪಾಸಣೆ ಮಾಡಿಸಿಕೊಳ್ಳುವಂತೆ ಸಹ ಪ್ರಯಾಣಿಕರಿಗೆ ಮನವಿ

ಬೆಂಗಳೂರು, ಮಾ 28, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ ಇಬ್ಬರು ಪ್ರಯಾಣಿಕರೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಎರಡು ಬಸ್‌ಗಳಲ್ಲಿ ಸಂಚರಿಸಿದ ಸಹ ಪ್ರಯಾಣಿಕರು ಕೂಡ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್‌ 19 ಸೋಂಕು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.ಸೋಂಕು ತಗುಲಿದ ವ್ಯಕ್ತಿ ಕಳೆದ ಮಾ 21ರಂದು ಕರ್ನಾಟಕ ಸಾರಿಗೆ ಬಸ್ಸು ನಂ.KA19 F3329, ಸಂಜೆ 4.30 ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರಿಗೆ ಪ್ರಯಾಣಿಸಿರುತ್ತಾರೆ.  ಈ ಬಸ್ಸಿನಲ್ಲಿ‌ ಪ್ರಯಾಣಿಸಿದ ಪ್ರಯಾಣಿಕರು ದಯವಿಟ್ಟು ಈ‌ ಕೂಡಲೇ ಹತ್ತಿರದ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ನಿಗಮದಿಂದ ಕೋರಲಾಗಿದೆ. ಅದೇ ರೀತಿ ಮಾರ್ಚ್ 18ರಂದು ಬೆಂಗಳೂರಿನಿಂದ ದಾವಣಗೆರೆಗೆ ಹೋಗಿದ್ದ ನಂ. ಕೆಎ57ಎಫ್‌3802 ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕನಿಗೂ ಸೋಂಕು ದೃಢಪಟ್ಟಿದ್ದು, ಈ ಬಸ್‌ನಲ್ಲಿಯೂ ಪ್ರಯಾಣಿಸಿದ ಇತರ ಪ್ರಯಾಣಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೆಎಸ್ಆರ್‌ಟಿಸಿ ಮನವಿ ಮಾಡಿದೆ.