ಬೆಂಗಳೂರು, ಮಾ. 24, ಕೊರೋನಾ ಸೋಂಕು ತಡೆಯಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ರಾಜ್ಯದ ಎಲ್ಲ ಸಾಮಾಜಿಕ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಬಡವರಿಗೆ ಎರಡು ತಿಂಗಳು ಪಿಂಚಣಿ ಗಳನ್ನು ಮುಂಗಡ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ.ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ನರೇಗಾ ಯೋಜನೆಯ ಹೆಚ್ಚುವರಿ ಮಾನವ ದಿನಗಳ ಬಾಬತ್ತು ಮುಂಗಡ ಹಣವನ್ನು ಬಿಡುಗಡೆ ಮಾಡಲಾಗುವುದು. ಎರಡು ತಿಂಗಳ ರೇಷನ್ ಅನ್ನು ಪಡಿತರ ಚೀಟಿದಾರರಿಗೆ ತಕ್ಷಣ ವಿತರಣೆಯನ್ನು ಮಾಡಲಾಗುವುದು. 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1000 ರೂ ನೀಡಲು ನಿರ್ಧಾರ ಕೈಗೊಂಡಿದ್ದೇವೆ, ಬಡವರ ಬಂಧು ಯೋಜನೆಯ ಸಾಲ ಮನ್ನಾ 2018-19 ನೇ ಸಾಲಿನ 9.10 ಕೋಟಿ ರೂ.ಮೊತ್ತವನ್ನು 15,120 ಜನರಿಗೆ, 2019-20ನೇ ಸಾಲಿನ 5.16 ಕೋಟಿ ರೂ.ಮೊತ್ತವನ್ನು 6,500 ಜನರಿಗೆ ಸೇರಿ ಒಟ್ಟು 13.20 ಕೋಟಿ ರೂ.ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದರು.
ನಾನು ಅಧಿಕಾರ ಸ್ವೀಕರಿಸಿದ ಒಂದೇ ವಾರದಲ್ಲಿ ಪ್ರವಾಹ ಬಂದಿತ್ತು. ನಾನೊಬ್ಬನೇ ಇಡೀ ರಾಜ್ಯ ಸುತ್ತಿ ಪರಿಹಾರ ಕೊಡುವ ಕೆಲಸ ಮಾಡಿದ್ದೇನೆ. ಇಡೀ ದೇಶದಲ್ಲೇ ಅತಿ ಹೆಚ್ಚು ಪರಿಹಾರ ನೀಡಿದ್ದೇವೆ. ಎನ್‌ಡಿಆರ್‌ಎಫ್ ಮಿತಿಗಿಂತಲೂ ಹೆಚ್ಚು ಅನುದಾನ ನೀಡಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.ಬಜೆಟ್‌ನಲ್ಲಿ ಆರು ವಲಯಗಳನ್ನಾಗಿ ಮಾಡಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ನಾನು ಆರಂಭದಲ್ಲಿ ಅಧಿಕಾರ ಸ್ವೀಕರಿಸಿದ ವೇಳೆ ಆತಂಕ ಇತ್ತು. ಅದೇ ಆತಂಕ ಕೊರೋನಾ ಸೋಂಕಿನಿಂದಾಗಿ ಈಗಲೂ ಇದೆ ಎಂದು ಯಡಿಯೂರಪ್ಪ ಹೇಳಿದರು.
ಈಗ ಮತ್ತೆ ಕೊವಿಡ್ 19 ಮಹಾಮಾರಿ ಕಾಣಿಸಿಕೊಂಡಿದೆ. ಈ ವೈರಾಣು ನಿಯಂತ್ರಣಕ್ಕೆ ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತಿದೆ. ಮೊದಲ ಸಾವು ಕರ್ನಾಟಕದಲ್ಲಿ ಆಗಿದ್ದರೂ ಕೋವಿಡ್ ವೈರಾಣು ಹರಡದಂತೆ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. 200 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಿದೆ. ನಮ್ಮ ಕ್ರಮಗಳಿಗೆ ಪ್ರಧಾನಿ ಸೇರಿ ಎಲ್ಲರೂ ಕರ್ನಾಟಕದ ಕ್ರಮವನ್ನು ಮೆಚ್ಚಿದ್ದಾರೆ. ಈಗ ಪರೀಕ್ಷಾ ಸಮಯ. ಈಗ ನಾವು 2ನೇ ಹಂತದಲ್ಲಿದ್ದೇವೆ. ಅದನ್ನು ಮುಂದಿನ ಹಂತಕ್ಕೆ ಹರಡದಂತೆ ನಾವೆಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಈ ಪರಿಸ್ಥಿತಿಯಿಂದ ಸೋಂಕಿತರು ಗುಣಮುಖರಾಗಿ ಹೊರಬರುತ್ತಾರೆ, ರಾಜ್ಯದ ಜನತೆ ರೋಗದ ಆತಂಕದಿಂದ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಜೆಟ್ ಮೇಲಿನ ಚರ್ಚೆ ಸಂಧರ್ಭದಲ್ಲಿ ಅನೇಕ ಸದಸ್ಯರು ಕೊಟ್ಟ ಸಲಹೆಗಳನ್ನು ಗಮನಿಸಿದ್ದೇನೆ, ಎಲ್ಲಾ ಸಲಹೆಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದ ಅವರು, ಕೋವಿಡ್ 19 ವೈರಸ್ ಕಾರಣಕ್ಕೆ ಜನ ಆತಂಕದಲ್ಲಿ ಇದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣ ಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಕೃಷ್ಣಾ ಯೋಜನೆಯ ಪುನರ್ವಸತಿ ವೆಚ್ಚ ಆರು ಪಟ್ಟು ಹೆಚ್ಚಾಗಿದೆ. ಆದರೂ ನಮ್ಮ ಸರ್ಕಾರ ಪುನರ್ವಸತಿ ಕಲ್ಪಿಸಲು ಬದ್ಧವಾಗಿದೆ. ಮಹಾದಾಯಿ ಯೋಜನೆ ಹಾಗು ಎತ್ತಿನಹೊಳೆ ಯೋಜನೆ ಜಾರಿಗೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ನಾನು ಹಸಿರು ಟವಲ್ ಹಾಕಿ ಕೃಷಿ ಬಜೆಟ್ ಮಂಡಿಸಿ, ಕೇಸರಿ ಶಾಲು ಹಾಕಿ ಹೊರಗೆ ಓಡಾಡ್ತೀನಿ ಎಂದು ಟೀಕೆ ಮಾಡಿದ್ದಾರೆ. ಕೇಸರಿ ತ್ಯಾಗದ ಸಂಕೇತ ಎಂದು ತಿರುಗೇಟು ನೀಡಿದರು.
ಮೋದಿ ಬಗ್ಗೆ ಯಡಿಯೂರಪ್ಪ ಗುಣಗಾನ ಮಾಡಿದ ಯಡಿಯೂರಪ್ಪ, ಮೋದಿ ವಿಫಲವಾಗಿದ್ದರೆ ಅವರನ್ನು ಎರಡನೇ ಬಾರಿ ಜನ ಗೆಲ್ಲಿಸುತ್ತಿರಲಿಲ್ಲ. ಅತಿ ಹೆಚ್ಚು ಅಂದರೆ 303 ಸೀಟುಗಳನ್ನು ಜನಕೊಟ್ಟಿದ್ದಾರೆ. ಹೀಗಾಗಿ ಜನರು ಮೋದಿಯನ್ನು ಒಪ್ಪಿಕೊಂಡಿದ್ದಾರೆ. ಜಗತ್ತಿನ ಅನೇಕ ಪ್ರಮುಖರು ಮೋದಿಯನ್ನು ರಾಜಕೀಯ ಮುತ್ಸದ್ಧಿ ಎಂದು ಕರೆದಿದ್ದಾರೆ. ಹೀಗಾಗಿ ಮೋದಿ ವಿಫಲ ನಾಯಕನಲ್ಲ. ಕೇಂದ್ರದಿಂದ ಅನುದಾನ ಇತರೆ ರಾಜ್ಯಗಳಲ್ಲೂ ಕಡಿಮೆಯಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದಿಂದ ಈ ಬಾರಿ 11,887 ಕೋಟಿ ರೂ ಕಡಿತವಾಗಿದೆ. ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಪಾಲಿನ ಹಣ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಸಾಲಿಗೆ ಸೇರಿದ ಕಾರಣದಿಂದಾಗಿ ಬಿಹಾರಕ್ಕಿಂತ ನಮಗೆ ಕಡಿಮೆ ಅನುದಾನ ದೊರಕಿದೆ. ಈ ತಾಂತ್ರಿಕ ಸಮಸ್ಯೆ ಬಗೆ ಹರಿಸುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಕೃಷಿ ಮತ್ತು ನೀರಾವರಿ ನನ್ನ ಆದ್ಯತೆಯಾಗಿದೆ. ಆರ್ಥಿಕ ಇತಿಮಿತಿಯ ನಡುವೆಯೂ ಪ್ರಸಕ್ತ ವರ್ಷಕ್ಕೆ ಕೃಷಿಗೆ 21,308 ಕೋಟಿಯನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೂ 10 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ ಆ ಭಾಗದ ಜನರ ಪುನರ್ವಸತಿ ಕಾರ್ಯ ಕೈಗೊಳ್ಳಲಾಗುವುದು. ಉತ್ತರ ಕರ್ನಾಟಕ ದ ಮಹಾದಾಯಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯ ಪ್ರಗತಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 500 ಕೊಟಿ ರೂ. ಒದಗಿಸಿದ್ದೇನೆ ಎಂದರು.
ಮಧ್ಯ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆಯಾದ ಎತ್ತಿನ ಹೊಳೆ ಯೋಜನೆಗೆ ಒಂದೂವರೆ ಸಾವಿರ ಕೋಟಿ ರೂ.ಒದಗಿಸಲಾಗಿದೆ. ಕೇಂದ್ರ ಬಜೆಟ್ ನಲ್ಲಿ ಕೃಷಿಗೆ ಶೇಕಡಾ 9.5ರಷ್ಟು ಹಣವನ್ನು ಮೀಸಲಿಟ್ಟಿದೆ. ಇದರ ಫಲ ರಾಜ್ಯಕ್ಕೂ ಹರಿದು ಬರಲಿದೆ. ನಮ್ಮ ಸರ್ಕಾರ ಹೊಸ ಕೃಷಿ ನೀತಿ ಜಾರಿ ಮಾಡಲಿದೆ. ಕೃಷಿ ಸಮ್ಮಾನ್ ಯೋಜನೆ ಅಡಿ ಕೇಂದ್ರದ ಆರು ಸಾವಿರದ ಜೊತೆ ನಮ್ಮ ಸರ್ಕಾರ ನಾಲ್ಕು ಸಾವಿರ ಕೊಡುತ್ತಿದೆ. ಬರ ನಿರೋಧಕ ಬೆಳೆ ಪ್ರೋತ್ಸಾಹ ಕ್ಕಾಗಿ ರೈತಸಿಂಧು ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.