ರಾಜ್ಯದಲ್ಲಿ ಎರಡು ಲಕ್ಷಕ್ಕೇರಿದ ಕೊರೋನಾ ವೈರಸ್ ಸೋಂಕು ಪತ್ತೆ ಪರೀಕ್ಷೆ: ಡಾ. ಕೆ. ಸುಧಾಕರ್

ಬೆಂಗಳೂರು, ಮೇ 24,ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಎರಡು ಲಕ್ಷ ದಾಟಿದ್ದು, ಸೋಂಕು ಪತ್ತೆ ಮಾಡುವ ಪ್ರಕ್ರಿಯೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಕಳೆದ 16 ದಿನಗಳಲ್ಲಿ ಒಂದು ಲಕ್ಷ ಸೋಂಕು ಪತ್ತೆ ಪರೀಕ್ಷೆ ಮಾಡಿದ್ದು, ಈವರೆಗೆ 2.03 ಲಕ್ಷ ಪರೀಕ್ಷೆಗಳು ನಡೆದಿವೆ. ಸೋಂಕು ಪತ್ತೆ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.ರಾಜ್ಯದಲ್ಲಿ 57 ಕೋವಿಡ್ 19 ಸೋಂಕು ಪತ್ತೆ ಪ್ರಯೋಗಾಲಯಗಳಿದ್ದು, ಈ ಸಂಖ್ಯೆ ಶೀಘ್ರದಲ್ಲಿ 60ರ ಗಡಿ ದಾಟಲಿದೆ. ಸೋಂಕಿತರನ್ನು ಪತ್ತೆ ಮಾಡುವ ವಿಧಾನದಲ್ಲೂ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ. ಸೋಂಕು ಪತ್ತೆ ಮಾಡುವ ಕಾರ್ಯದಲ್ಲಿ ಎಲ್ಲಾ ಪ್ರಯೋಗಾಲಯಗಳ ಸಿಬ್ಬಂದಿ, ವೈದ್ಯರು, ಪ್ರಯೋಗಾಲಯ ತಂತ್ರಜ್ಞರು ನಿರಂತರವಾಗಿ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.