ಮಂಗಳೂರು, ಮಾ.26, ನದಿಗೆ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ಬೆಳ್ತಂಗಡಿ ತಾಲೂಕಿನ ಕೊಡಿಂಗೇರಿ ಎಂಬಲ್ಲಿ ನಡೆದಿದೆ.ಬೆಳ್ತಂಗಡಿಯ ಫಲ್ಗಣಿ ನದಿಗೆ ಈ ಇಬ್ಬರು ಇಂದು ಬೆಳಗ್ಗೆ ಈಜಾಡಲು ತೆರಳಿದ್ದರು ಎನ್ನಲಾಗಿದೆ.ಮೃತರನ್ನು ಶಿರ್ತಾಡಿ ಗ್ರಾಮದ ಪಣಪಿಲ್ ದರ್ಖಾಸು ನಿವಾಸಿ ಮಹಾಬಲ ಪೂಜಾರಿ ಎಂಬವರ ಪುತ್ರ ವಾಸುದೇವ (22) ಹಾಗೂ ಅದೇ ಗ್ರಾಮದ ಕೊಣಾಜೆ ಕೊಡಿಂಜ ನಿವಾಸಿ ಸಾಧು ಪೂಜಾರಿ ಎಂಬವರ ಪುತ್ರ ಇಶಾನ್ (8) ಮೃತಪಟ್ಟವರು ಎಂದು ತಿಳಿದುಬಂದಿದೆ. ಈ ಇಬ್ಬರು ಬಾಲಕರು ಹೊಸಂಗಡಿ ಗ್ರಾಮದ ಸುನೀಲ್ ಎಂಬವರ ಮನೆಗೆ ತೆರಳಿದ್ದರು. ಇಂದು ಬೆಳಗ್ಗೆ ಸುನೀಲ್ ಹುಲ್ಲು ತರಲು ತೋಟಕ್ಕೆ ಹೋಗಿದ್ದರು. ಈ ಇಬ್ಬರು ಬಾಲಕರು ಫಲ್ಗುಣಿ ನದಿ ತೀರದಲ್ಲಿ ಆಟವಾಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಅವರಿಬ್ಬರೂ ಕಾಣೆಯಾಗಿದ್ದರು. ಹುಡುಕಿದಾಗ ನದಿಯಲ್ಲಿ ಮೃತಪಟ್ಟಿರುವುದು ಬೆಳಿಕಿಗೆ ಬಂದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಪೊಲೀಸರು ತಿಳಿಸಿದ್ದಾರೆ.ಮೃತದೇಹಗಳನ್ನು ನದಿಯಿಂದ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.