ಜರ್ಮನಿಯ ಲಿಂಡೌ ನೊಬೆಲ್ ಸಭೆಗೆ ವಿಶ್ರೀಕೃವಿವಿಯ ಇಬ್ಬರು ಆಯ್ಕೆ
ಬಳ್ಳಾರಿ 27: ಜರ್ಮನಿಯ ಲಿಂಡೌನಲ್ಲಿ ಜೂನ್ 29ರಿಂದ ಜುಲೈ 4ರವರೆಗೆ ಜರುಗಲಿರುವ ಪ್ರತಿಷ್ಠಿತ ಅಂತರಾಷ್ಟ್ರೀಯ ಲಿಂಡೌ ನೊಬೆಲ್ ಪುರಸ್ಕೃತರ ಸಭೆಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಗೌತಮಿ ಪಾಟೀಲ್ ಮತ್ತು ಡಾ.ನಸೀಮ್ ಕೌಸರ್ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಡಿಎಸ್‌ಟಿ ದೇಶವ್ಯಾಪಿ ಆಯ್ಕೆ ಮಾಡಿರುವ ಒಟ್ಟು 29 ಯುವ ವಿಜ್ಞಾನಿಗಳ ಪೈಕಿ ಬಳ್ಳಾರಿಯ ಇಬ್ಬರು ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ವಿಶೇಷ. ಪ್ರತಿವರ್ಷ ಜರುಗುವ ಲಿಂಡೌ ಜಾಗತಿಕ ಸಭೆಯಲ್ಲಿ ವಿಶ್ವದ ಆಯ್ದ 600 ಯುವ ವಿಜ್ಞಾನಿಗಳನ್ನು ಆಹ್ವಾನಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತ ದಿಗ್ಗಜರೊಂದಿಗೆ ಚರ್ಚಾಕೂಟ, ದುಂಡು ಮೇಜಿನ ಪರಿಷತ್ತುಗಳನ್ನು ನಡೆಸುತ್ತದೆ. 74ನೇ ಆವೃತ್ತಿಯ ಸಮ್ಮೇಳನವು ಈ ಬಾರಿ ರಸಾಯನಶಾಸ್ತ್ರ ವಿಷಯಕ್ಕೆ ಮೀಸಲಿಟ್ಟಿದ್ದು, ಆಯ್ಕೆಗೊಂಡಿರುವ ವಿದ್ಯಾರ್ಥಿಗಳ ಪ್ರವಾಸ ಹಾಗೂ ಇನ್ನಿತರ ಖರ್ಚು, ವೆಚ್ಚಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ನಿಭಾಯಿಸಲಿದೆ. ಈ ಸಂಶೋಧನಾರ್ಥಿಗಳು ವಿವಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಕೆ.ಎಸ್ ಲೋಕೇಶ್ ಇವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದಾರೆ. ಲಿಂಡೌ ನೊಬೆಲ್ ಸಭೆಗೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಿವಿಯ ಕುಲಪತಿಗಳಾದ ಪ್ರೊ.ಎಂ ಮುನಿರಾಜು, ಕುಲಸಚಿವರಾದ ಎಸ್.ಎನ್ ರುದ್ರೇಶ್ ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಂ. ಸಾಲಿ ಹಾಗೂ ವಿಭಾಗದ ಸಿಬ್ಬಂದಿ ಶುಭಾಶಯ ತಿಳಿಸಿದ್ದಾರೆ.