ಧಾರವಾಡ ಮೇ.20, ಕೋವಿಡ್-19 ವೈರಸ್ ನಿಂದ ಗುಣಮುಖರಾಗಿರುವ ಇಬ್ಬರು ವ್ಯಕ್ತಿಗಳನ್ನು ಹುಬ್ಬಳ್ಳಿಯ ಕಿಮ್ಸ್ ನಿಂದ ಮಂಗಳವಾರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಮುಲ್ಲಾ ಓಣಿಯ ಪೀಡಿತ-430 (30 ವರ್ಷ, ಮಹಿಳೆ) ಹಾಗೂ ಆಝಾದ್ ಕಾಲನಿಯ ಪೀಡಿತ-431( 13 ವರ್ಷ,ಬಾಲಕಿ) ಇಬ್ಬರು ಸಂಪೂರ್ಣ ಗುಣಮುಖರಾಗಿದ್ದಾರೆ.24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರು ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಎಕ್ಸ್ ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದರಿಂದ ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 09 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಸದ್ಯ ಜಿಲ್ಲೆಯ 17 ಜನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.