ದ್ವಿ ಶತದತ್ತ ರನ್ ಮಷೀನ್ ಕೊಹ್ಲಿ : 500ರ ಸಮೀಪ ಟೀಮ್ ಇಂಡಿಯಾ

ಪುಣೆ, ಅ 11:   ನಾಯಕ ವಿರಾಟ್ ಕೊಹ್ಲಿ (ಔಟಾಗದೆ 194 ರನ್) ಶತಕ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ (59 ರನ್) ಅರ್ಧ ಶತಕದ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.  

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಮೂರು ವಿಕೆಟ್ ಕಳೆದುಕೊಂಡು 273 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಟೀ ವಿರಾಮದ ವೇಳೆಗೆ  141 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 473 ರನ್ ಸೇರಿಸಿದೆ. 

63 ರನ್ಗಳಿಂದ ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಮಾಡಿದರು. ಎಂದಿನಂತೆ ತಮ್ಮ ಸ್ವಾಭಾವಿಕ ಬ್ಯಾಟಿಂಗ್ ಮಾಡಿದ ಅವರು ಆಫ್ರಿಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಸಮಚಿತ್ತದಿಂದ ಬ್ಯಾಟಿಂಗ್ ಮಾಡಿದರು. 286 ಎಸೆತಗಳಲ್ಲಿ 28 ಬೌಂಡರಿಯೊಂದಿಗೆ 194 ರನ್ ಗಳಿಸಿ ವೃತ್ತಿ ಜೀವನದ 26 ಟೆಸ್ಟ್ ಶತಕ ಪೂರೈಸಿದರು. ಇನ್ನು, ಅವರು ವೃತ್ತಿ ಜೀವನದ ಏಳನೇ ದ್ವಿಶತಕ ದಾಖಲಿಸಲು ಕೇವಲ ಆರು ರನ್ ಅಗತ್ಯವಿದೆ. ಟೀ ವಿರಾಮದ ಬಳಿಕ ಅವರು ಈ ಸಾಧನೆ ಮಾಡಲಿದ್ದಾರೆ ಎಂದು  ನಿರೀಕ್ಷಿಸಲಾಗಿದೆ. 

ಮತ್ತೊಂದು ತುದಿಯಲ್ಲಿ ಕೊಹ್ಲಿ ಹೆಗಲು ನೀಡಿ ಅಜಿಂಕ್ಯಾ ರಹಾನೆ ಕೂಡ ಸೊಗಸಾಗಿ ಬ್ಯಾಟಿಂಗ್ ಮಾಡಿದರು. 168 ಎಸೆತಗಳಲ್ಲಿ ರಹಾನೆ ಎಂಟು ಬೌಂಡರಿಯೊಂದಿಗೆ ಅಜೇಯ 59 ರನ್ ದಾಖಲಿಸಿ ಕೇಶವ್ ಮಹರಾಜ್ಗೆ ವಿಕೆಟ್ ಒಪ್ಪಿಸಿದರು.  

ನಂತರ, ಕ್ರೀಸ್ಗೆ ಬಂದ ರವೀಂದ್ರ ಜಡೇಜಾ 59 ಎಸೆತಗಳಲ್ಲಿ ಎರಡು ಬೌಂಡರಿಯೊಂದಿಗೆ ಅಜೇಯ 25 ರನ್ ಗಳಿಸಿ ಕ್ರೀಸ್ನಲ್ಲಿ ಉಳಿದಿದ್ದಾರೆ. 

ಎರಡನೇ ದಿನ ದಕ್ಷಿಣ ಆಫ್ರಿಕಾ ಬೌಲರ್ ಗಳು ವಿಕೆಟ್ ತೆಗೆಯಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಸಾಧ್ಯವಾಗಲಿಲ್ಲ. ಗುರುವಾರ ಕಗಿಸೋ ರಬಾಡ ಮೂರು ವಿಕೆಟ್ ಕಿತ್ತಿದ್ದರು. ಆದರೆ, ಶುಕ್ರವಾರ ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸ್ಪಿನ್ನರ್ ಕೇಶವ್ ಮಹರಾಜ್ ಅವರು ಅಜಿಂಕ್ಯಾ ರಹಾನೆ ಅವರ ಒಂದೇ-ಒಂದು ವಿಕೆಟ್ ಪಡೆದರು.  

ಸಂಕ್ಷಿಪ್ತ ಸ್ಕೋರ್ಟೀ ವಿರಾಮ) 

ಭಾರತ 

ಪ್ರಥಮ ಇನಿಂಗ್ಸ್: 141 ಓವರ್ ಗಳಿಗೆ 473/4 (ಮಯಾಂಕ್ ಅಗರ್ವಲ್ 108, ವಿರಾಟ್ ಕೊಹ್ಲಿ ಔಟಾಗದೆ 194, ಅಜಿಂಕ್ಯಾ ರಹಾನೆ ಔಟಾಗದೆ 59, ಚೇತೇಶ್ವರ ಪೂಜಾರ 58; ಕಗಿಸೋ ರಬಾಡ 93 ಕ್ಕೆ 3, ಕೇಶವ್ ಮಹರಾಜ್ 155 ಕ್ಕೆ 1)