ವಾಷಿಂಗ್ಟನ್, ಏಪ್ರಿಲ್ 9, ಕೊರೊನಾವೈರಸ್ ಸೋಂಕು ಚಿಕಿತ್ಸೆಗಾಗಿ ಬಳಸಬಹುದಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಧನ್ಯವಾದ ತಿಳಿಸಿದ್ದಾರೆ.
‘ಅಮೆರಿಕದಲ್ಲಿ ರಾಷ್ಟ್ರೀಯ ದಾಸ್ತಾನು ಸದ್ಯ, ಸುಮಾರು 30 ದಶಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ. ಇವನ್ನು ಲಕ್ಷಾಂತರ ಜನರಿಗೆ ವಿತರಿಸುತ್ತೇವೆ. ಮನವಿ ಮಾಡಿದ್ದಕ್ಕಿಂತ ಹೆಚ್ಚು ತರಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಭಾರತದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು ಕೊವಿದ್-19 ಕುರಿತ ದೈನಂದಿನ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಟ್ರಂಪ್ ಪದೇ ಪದೇ ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಕರೋನವೈರಸ್ ವಿರುದ್ಧದ ಚಿಕಿತ್ಸೆಗೆ ಬಳಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೂ ಇದರ ಪರಿಣಾಮಗಳು ಇನ್ನೂ ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಔಷಧದ ಮೇಲಿನ ರಫ್ತು ನಿರ್ಬಂಧವನ್ನು ತೆಗೆದುಹಾಕಿದ್ದಕ್ಕಾಗಿ ಟ್ರಂಪ್ ಅವರು ಬುಧವಾರ ಮೋದಿಗೆ ಸಾರ್ವಜನಿಕವಾಗಿ ಧನ್ಯವಾದ ಸಲ್ಲಿಸಿದರು.
‘ಬಿಕ್ಕಟ್ಟಿನ ಸಂದರ್ಭಗಳಲ್ಲಿ ಮಿತ್ರ ದೇಶಗಳ ನಡುವೆ ಇನ್ನೂ ಹೆಚ್ಚಿನ ಸಹಕಾರ ಅಗತ್ಯವಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿರ್ಧಾರಕ್ಕೆ ಭಾರತ ಮತ್ತು ಭಾರತೀಯ ಜನರಿಗೆ ಧನ್ಯವಾದಗಳು. ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಾಯಕತ್ವ ಭಾರತಕ್ಕೆ ಮಾತ್ರವಲ್ಲದೆ ಮಾನವೀಯತೆಗೂ ಸಹಾಯ ಮಾಡಿದೆ.’ ಎಂದು ಟ್ರಂಪ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಈ ಮಾತ್ರೆಗಳನ್ನು ಪಡೆಯಲು ಟ್ರಂಪ್ ಪದೇ ಪದೇ ಬೇಡಿಕೆ ಇಡುತ್ತಿದ್ದ ಕೆಲವೇ ದಿನಗಳಲ್ಲಿ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ರಫ್ತು ಮೇಲಿನ ನಿಷೇಧವನ್ನು ಭಾಗಶಃ ತೆಗೆದುಹಾಕಿರುವುದಾಗಿ ಎಂದು ಮಂಗಳವಾರ ಭಾರತ ಸರ್ಕಾರ ಘೋಷಿಸಿತ್ತು.ಕೊರೊನಾವೈರಸ್ ಉಲ್ಬಣ ಹಿನ್ನೆಲೆಯಲ್ಲಿ, ಭಾರತ ಮಾರ್ಚ್ ನಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತು ನಿಷೇಧಿಸಿತ್ತು.