ವಾಷಿಂಗ್ಟನ್, ಜೂನ್ 9, ಇಡೀ ವಿಶ್ವವೇ ಕೊರೊನಾ ಬಿಕ್ಕಟ್ಟಿಗೆ ಸಿಲುಕಿದ್ದರೂ, ಅಮೆರಿಕದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೂ 2020 ರ ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ಮತ್ತೆ ಆರಂಭಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ.ಈ ತಿಂಗಳಲ್ಲೇ ಅಭಿಯಾನಗಳನ್ನು ನಡೆಸಲು ಟ್ರಂಪ್ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಸುದ್ದಿ ಮಾಧ್ಯಮ ಪ್ರಕಟಿಸಿದೆ. ಆದಾಗ್ಯೂ ಬೃಹತ್ ಸಭೆ, ಸಮಾರಂಭಗಳನ್ನು ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ವರದಿ ತಿಳಿಸಿದೆ.ಜಾರ್ಜ್ ಫ್ಲೋಯ್ಡ್ ಸಾವಿನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು ಅನೇಕರು ಗುಂಪು ಸೇರುತ್ತಿರುವುದರಿಂದ ಟ್ರಂಪ್ ಕೂಡ ಚುನಾವಣಾ ಪ್ರಚಾರ ನಡೆಸಲು ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಚುನಾವಣಾ ಅಭಿಮತದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಗೆಲ್ಲುವ ಸಾಧ್ಯತೆ ಇದೆ ಎಂದು ವರದಿಯಾಗಿದ್ದು ಇದೂ ಕೂಡ ಟ್ರಂಪ್ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ಚಿಂತಿಸಲು ಕಾರಣ ಎಂದು ಹೇಳಲಾಗಿದೆ.