ವಾಷಿಂಗ್ಟನ್, ಮೇ 18,ಕಳೆದ ಕೆಲ ದಿನಗಳಲ್ಲಿ ದೇಶಾದ್ಯಂತ ಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.‘ಕೆಲ ಪ್ರದೇಶಗಳನ್ನು ಹೊರತುಪಡಿಸಿ ಅಮೆರಿಕದಾದ್ಯಂತ ಕೊರೊನವೈರಸ್ ಪ್ರಕರಣಗಳಲ್ಲಿ ಭಾರಿ ಇಳಿಮುಖ ಕಂಡುಬರುತ್ತಿದೆ. ಇದು ಶುಭ ಸಮಾಚಾರವಾಗಿದೆ.’ ಎಂದು ಟ್ರಂಪ್ ಟ್ವಿಟರ್ ನಲ್ಲಿ ಹೇಳಿದ್ದಾರೆ. ಜಾನ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ನವೀಕೃತ ವರದಿಯಂತೆ ಅಮೆರಿಕದಲ್ಲಿ ಇದುವರೆಗೆ ಒಟ್ಟು 14,86,423 ಕೊವಿಡ್-19 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ.
ಮಾರಕ ಸೋಂಕಿಗೆ ದೇಶಾದ್ಯಂತ 89,550 ಮಂದಿ ಬಲಿಯಾಗಿದ್ದು, ಸೋಂಕಿನಿಂದ 2,68,000 ರೋಗಿಗಳು ಚೇತರಿಸಿಕೊಂಡಿದ್ದಾರೆ. ಕಳೆದ ಏಪ್ರಿಲ್ ಅಂತ್ಯದಲ್ಲಿ ಅಮೆರಿಕದಲ್ಲಿ ಸೋಂಕು ಪ್ರಕರಣಗಳ ದಿನನಿತ್ಯದ ಏರಿಕೆ ಸುಮಾರು 30,000ದಷ್ಟಿತ್ತು. ಆದರೆ, ಮೇ ತಿಂಗಳ ಆರಂಭದಿಂದ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ 18,000ದಿಂದ 27,000ರ ನಡುವೆ ಏರಿಳಿತ ಕಾಣುತ್ತಿದೆ. ಕೊವಿಡ್-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಇದುವರೆಗೆ 47 ಲಕ್ಷ ಕೊವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿಗೆ 3,15,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.