ತ್ರಿಪುರಾ : ಆನೆಗಳ ದಾಳಿಗೆ ರಿಕ್ಷಾ ಜಖಂ, ಚಾಲಕನಿಗೆ ಗಾಯ

ಅಗರ್ತಲ, ಜೂನ್ 04,ಪಶ್ಚಿಮ ತ್ರಿಪುರಾದ ಖೋವಾಯ್ ಜಿಲ್ಲೆಯ ಅಥರಮುರಾ ಬೆಟ್ಟ ಶ್ರೇಣಿಯ ತಪ್ಪಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡು ಆನೆಗಳ ಹಿಂಡು ನಡೆಸಿದ ದಾಳಿಯಲ್ಲಿ ಆಟೋರಿಕ್ಷಾ ಜಖಂಗೊಂಡು ಚಾಲಕನಿಗೆ ಗಾಯಗಳಾಗಿವೆ. ತೆಲಿಯಮುರಾ ಉಪವಿಭಾಗದ ಕೃಷ್ಣಾಪುರ ಪ್ರದೇಶದ ಬಳಿ ಆಟೋರಿಕ್ಷಾ ಮೇಲೆ ಏಕಾಏಕಿ ದಾಳಿ ನಡೆಸಿವೆ. ಚಾಲಕ ಅಭಿಜಿತ್ ಧಾರ್ ಇಬ್ಬರು ಪ್ರಯಾಣಿಕರೊಡನೆ ತೇಲಿಯಮುರದ ನೇತಾಜಿನಗರದಿಂದ ಮಹಾರಾನಿಪುರಕ್ಕೆ ಮುಸ್ಸಜೆಯಲ್ಲಿ ಹೊರಟಿದ್ದರು.

ಆಟೋರಿಕ್ಷಾ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ  ಮೂರು ಆನೆಗಳು ಎದುರಾದವು. ಕೂಡಲೇ ಜಿಗಿದ ಪ್ರಯಾಣಿಕರು ಸ್ಥಳದಿಂದ ಓಡಿಹೋದರು. ಆದರೆ ಆನೆಗಳು ಆಟೋದಿಂದ ಹೊರಗೆ ಹೋಗಲು ಬಿಡದೆ ಚಾಲಕನ ಮೇಲೆ ಹಲ್ಲೆ ನಡೆಸಿದವಾದರೂ, ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಗಯಗೊಂಡ ಚಾಲಕನ ಕೂಗು ಕೇಳಿದ ಗ್ರಾಮಸ್ಥರು ಆತನನ್ನು ತೆಲಿಯಮುರಾ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಅಥರಮುರಾ ತಪ್ಪಲನ್ನು ಆನೆ ಕಾರಿಡಾರ್ ಎಂದು ಗುರುತಿಸಲಾಗಿದೆ  ಆಗಾಗ್ಗೆ ಅವು ಆಹಾರ ಅರಸಿ ಇಲ್ಲಿಗೆ ಬರುತ್ತವೆ. ರಾಜ್ಯ ಸರ್ಕಾರವು ಈ ಹಿಂದೆ ಜಂಬೋ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಕಳುಹಿಸಿತ್ತು.  ಆದರೆ ಕೇಂದ್ರದಿಂದ ಹಣ ಲಭ್ಯವಿಲ್ಲದ ಕಾರಣ ಅದನ್ನು ನಿಲ್ಲಿಸಬೇಕಾಯಿತು. ಇದರ ಪರಿಣಾಮವಾಗಿ, ಪ್ರತಿವರ್ಷ ಈ ಪ್ರದೇಶದ ಬಡ ರೈತರು ಬೆಳೆ ಹಾಗೂ ಇನ್ನಿತರ ವಸ್ತು, ಉತ್ಪನ್ನಗಳನ್ನು ಕಳೆದುಕೊಳ್ಳುತ್ತಿರುವುದಲ್ಲದೆ, ಅನೇಕ ಜನರ ಮನೆಗಳು ಹಾನಿಗೀಡಾಗಿವೆ.